Home ಧಾರ್ಮಿಕ ಸುದ್ದಿ ನಾಳೆ ಆಟಿ ಅಮಾವಾಸ್ಯೆ: ನರಹರಿ ಪರ್ವತ- ಕಾರಿಂಜ ಕ್ಷೇತ್ರದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ

ನಾಳೆ ಆಟಿ ಅಮಾವಾಸ್ಯೆ: ನರಹರಿ ಪರ್ವತ- ಕಾರಿಂಜ ಕ್ಷೇತ್ರದಲ್ಲಿ ಸಾವಿರಾರು ಭಕ್ತರಿಂದ ತೀರ್ಥಸ್ನಾನ

1835
0
SHARE
ಕಾರಿಂಜ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನ.

ಬಂಟ್ವಾಳ: ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರಗಳೆನಿಸಿಕೊಂಡಿರುವ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನಗಳು ಪ್ರತಿವರ್ಷ ಆಟಿ ಆಮಾವಾಸ್ಯೆಯ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳ ತೀರ್ಥಸ್ನಾನಕ್ಕೆ ಸಾಕ್ಷಿಯಾಗುತ್ತಿದ್ದು, ಈ ಬಾರಿ ಆ. 1ರಂದು ತೀರ್ಥಸ್ನಾನ ನಡೆಯಲಿದೆ.

ಉಭಯ ಕ್ಷೇತ್ರಗಳಲ್ಲಿನ ತೀರ್ಥ ಘಟ್ಟದಲ್ಲಿ ಭಕ್ತಾದಿಗಳು ಮಿಂದು ದೇವರ ದರ್ಶನ ಪಡೆಯಲಿದ್ದು, ಮುಂಜಾನೆ 4ರಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಆಗಮಿಸಲಿದೆ. ಶ್ರೀ ನರಹರಿ ಕ್ಷೇತ್ರದಲ್ಲಿ ಪರ್ವತ ಹತ್ತಿದ ಬಳಿಕವೇ ತೀರ್ಥಸ್ನಾನ ಮಾಡುವ ಅವಕಾಶವಿದ್ದು, ಕಾರಿಂಜ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದ ಬಳಿಕ ಬೆಟ್ಟ ಹತ್ತಬೇಕಿದೆ.

ಆಟಿ ಆಮಾವಾಸ್ಯೆಯ ದಿನ ಕ್ಷೇತ್ರಗಳ ಸುತ್ತ ಎಲ್ಲಿ ನೋಡಿದರೂ ಭಕ್ತರ ದಂಡೇ ಗೋಚರಿಸಲಿದ್ದು, ಮುಂಜಾನೆಯಿಂದ ಮಧ್ಯಾಹ್ನದವರೆಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಕಂಡುಬರಲಿದ್ದಾರೆ. ಈ ದಿನ ಬಹುತೇಕ ಭಕ್ತರು ಎರಡೂ ಕ್ಷೇತ್ರಗಳಿಗೂ ಭೇಟಿ ನೀಡಿ, ತೀರ್ಥಸ್ನಾನಗೈಯ್ಯುವುದು ವಿಶೇಷವಾಗಿದೆ.

ನರಹರಿಯಲ್ಲಿ ವಿಶೇಷತೆ
ಶ್ರೀಕೃಷ್ಣ, ಪಾಂಡವರಿಂದ ಸ್ಥಾಪಿತವಾಗಿ ಕ್ಷೇತ್ರವಾಗಿದ್ದು, ಹೀಗಾಗಿ ನರ (ಪಾಂಡವರು)- ಹರಿ(ಶ್ರೀಕೃಷ್ಣ) ಎಂದು ಹೆಸರು ಬಂದಿದೆ. ಆಟಿ ಅಮಾವಾಸ್ಯೆಯ ಹಿಂದಿನ ದಿನ ಕ್ಷೇತ್ರಕ್ಕೆ ಆಗಮಿಸಿದ್ದು, ಕೃಷ್ಣನು ತನ್ನ ಆಯುಧದಿಂದ ಶಂಖ, ಚಕ್ರ, ಗದಾ, ಪದ್ಮ ಎಂಬ ತೀರ್ಥಕೆರೆಗಳನ್ನು ನಿರ್ಮಿಸಿದನು. ಬಳಿಕ ಅರ್ಜುನನು ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ ಎಂದು ಪ್ರಸಿದ್ಧಿ ಇದೆ. 1988ರಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಪ್ರಾರಂಭಗೊಂಡು 1992ರಲ್ಲಿ ಬ್ರಹ್ಮಕಲಶೋತ್ಸವ ನಡೆದಿರುತ್ತದೆ.

15 ಸಾವಿರಕ್ಕೂ ಅಧಿಕ ಭಕ್ತರು
ರೋಗರುಜಿನಗಳ ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಹಗ್ಗ ಸೇವೆ ಇಲ್ಲಿನ ವಿಶೇಷತೆಯಾಗಿದ್ದು, ಆಟಿ ಆಮಾವಾಸ್ಯೆಯ ದಿನ 15 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತೀರ್ಥಸ್ನಾನಗೈಯುತ್ತಾರೆ. ಕಾರ್ತಿಕ ದೀಪೋತ್ಸವ, ಪ್ರತಿಷ್ಠಾ ದಿನ ಶಿವರಾತ್ರಿ ಉತ್ಸವಗಳು ಕೂಡ ಕ್ಷೇತ್ರದ ವಿಶೇಷತೆಯಾಗಿವೆ.

ಕಾರಿಂಜದ ವಿಶೇಷತೆ
ಕಾರಿಂಜ ಕ್ಷೇತ್ರವು ಎಲ್ಲಾ ಯುಗದಲ್ಲಿಯೂ ಇದ್ದು, ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಕಲಿಯುಗದಲ್ಲಿ ಕ್ಷೇತ್ರಕ್ಕೆ ಕಾರಿಂಜ ಎಂಬ ಹೆಸರು ಬಂದಿದ್ದು, ಕ್ಷೇತ್ರಕ್ಕೆ ಪಾಂಡವರು ಬಂದು ಭೀಮನ ಗದೆಯಿಂದ ನಿರ್ಮಾಣವಾದ ಗದಾತೀರ್ಥದಲ್ಲಿ ಭಕ್ತಾದಿಗಳು ತೀರ್ಥ ಸ್ನಾನ ಮಾಡುತ್ತಾರೆ. ಇದರ ಮಣ್ಣಿನಿಂದಲೇ ಕೊಡ್ಯಮಲೆ ಕಾಡು ನಿರ್ಮಾಣವಾಗಿದೆ.

ಕ್ಷೇತ್ರದ ಮೇಲ್ಭಾಗದಲ್ಲಿ ಭೀಮನ ಮೊಣಕಾಲಿನಿಂದ ನಿರ್ಮಾಣವಾದ ಜಾನುತೀರ್ಥದಲ್ಲಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಸೀತೆಯ ಹೆಬ್ಬೆರಳಿನಿಂದ ನಿರ್ಮಾಣವಾದ ಉಂಗುಷ್ಟ ತೀರ್ಥದಲ್ಲಿ ಭಕ್ತಾದಿಗಳಿಗೆ ಪ್ರೋಕ್ಷಣೆಗೆ ಅವಕಾಶವಿದೆ. ಜತೆಗೆ ಪಾಂಡವರಿಂದ ನಿರ್ಮಾಣವಾದ ವನಭೋಜನ ಗುಹೆಯೂ ಇದೆ. ಆಟಿ ಅಮಾವಾಸ್ಯೆಯ ಸಂದರ್ಭ ಗದಾ ತೀರ್ಥದಲ್ಲಿ ಔಷಧೀಯ ಅಂಶಗಳಿರುವುದಿಂದ ಅಂದು ಕೆರೆಯಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ದೂರವಾಗುತ್ತವೆ ಎಂಬ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ ಎಂಬ ನಂಬಿಕೆ ಇದೆ.

LEAVE A REPLY

Please enter your comment!
Please enter your name here