ಬಂಟ್ವಾಳ: ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯ ದಿನ ನಿಗದಿಯ ಸಂಪ್ರದಾಯವು ಅತ್ಯಂತ ವಿಶಿಷ್ಟವಾಗಿದೆ. ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಕದೃ ಮುಡಿ ಏರಿಸಿ ಕುದಿ ಕರೆಯಲಾಗಿದ್ದು, ರವಿವಾರ ಬೆಳಗ್ಗೆ ಜೋರಾಗಿ ಮೂರು ಬಾರಿ “29 ಪೋಪಿನಾನಿ ಅಯಿತ್ತಾರ ದಿನತ್ತಾನಿ ಆರಡ’ (29 ಹೋಗುವ ದಿನ ರವಿವಾರ ಆರಡ) ಎನ್ನುವ ಮೂಲಕ ಕ್ಷೇತ್ರದ ಜಾತ್ರೆ ದಿನಾಂಕಗಳು ನಿಗದಿಯಾದವು.
ಕ್ಷೇತ್ರದಲ್ಲಿ ಶನಿವಾರ ರಾತ್ರಿ ನಂದ್ಯ ಕ್ಷೇತ್ರದಿಂದ, ಮಳಲಿ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ, ರಾತ್ರಿ ಧ್ವಜಾರೋಹಣಗೊಂ ಡಿತ್ತು. ಬಳಿಕ ಕೊಡಿ ಬಲಿ ನಡೆದು ರವಿವಾರ ಮುಂಜಾನೆ ಕಂಚು ಬೆಳಕು (ಕಂಚಿಲ್) ಬಲಿ ಉತ್ಸವ ಜರಗಿತು. ಭಕ್ತರು ಕಂಚಿಲ್ ಸೇವೆಯ ಹರಕೆ ತೀರಿಸಿದರು. ಬಳಿಕ ಸಣ್ಣ ರಥೋತ್ಸವ ನಡೆಯಿತು.
ಕ್ಷೇತ್ರದ ಜಾತ್ರೆಯ ದಿನ ನಿಗದಿಗೆ ಪುತ್ತಿಗೆ ಸೋಮನಾಥನಲ್ಲಿಗೆ ತೆರಳುವ ಸಂಪ್ರದಾಯವಿದ್ದು, ರವಿವಾರ ಬೆಳಗ್ಗೆ ಜೋಯಿಸರು ಹಿಂಗಾರದ ಸಿರಿಯನ್ನು ಹಿಡಿದು ಶ್ರೀ ದುರ್ಗಾಪರಮೇಶ್ವರೀ ಗುಡಿಯ ಬಳಿ ಬಂದು ವಾಲಗ ಊದುವ ಸೇರಿಗಾರರ ಬಳಿ ಜಾತ್ರೆ ದಿನಗಳ ಅವಧಿಯನ್ನು ಹೇಳಿದರು.
“ಪುರಲ್ದ ಚೆಂಡ್’
ಪೊಳಲಿ ಜಾತ್ರೆಯಲ್ಲಿ “ಪುರಲ್ದ ಚೆಂಡ್’ ಬಹಳ ಖ್ಯಾತಿ ಗಳಿಸಿದ್ದು, 5 ದಿನಗಳ ಚೆಂಡು ನಡೆಯುತ್ತದೆ. ಜತೆಗೆ 5 ದಿನಗಳಿಗೊಮ್ಮೆ ದಂಡಮಾಲೆ, ಕೋಳಿ ಗುಂಟ, ಜಾತ್ರೆ ಕೊನೆಗೊಂಡ ಬಳಿಕ ಕೊಡಮಣಿತ್ತಾಯಿ, ಉಳ್ಳಾಕುಲು, ಮಗೃಂತಾಯಿ, ಬಂಟ ಪರಿವಾರ ದೈವಗಳ ನೇಮ ನಡೆಯುತ್ತದೆ.