ವಿಟ್ಲ: ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯೇ ದೇವರ ಮೇಲಿರುವ ನಿಜವಾದ ಪ್ರೀತಿ. ಬರಿಮಾರು ಚರ್ಚ್ನಲ್ಲಿ ಇದು ಸಾಕ್ಷಾತ್ಕಾರಗೊಳ್ಳುತ್ತಿದೆ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೊ ಹೇಳಿದರು.
ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಬರಿಮಾರು ಚರ್ಚ್ಗೆ ರವಿವಾರ ಸಂಜೆ ಭೇಟಿ ನೀಡಿದ ಅವರು, ಬರಿಮಾರು ಚರ್ಚ್ನ ವ್ಯಾಪ್ತಿಗೆ ಒಳಪಟ್ಟು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಹೆಸರಿನಲ್ಲಿ ವಿಶೇಷ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಕಳೆದ 125 ವರ್ಷಗಳಲ್ಲಿ ದೇವರು ವಿಶೇಷ ರೀತಿಯಲ್ಲಿ ಬರಿಮಾರು ಚರ್ಚ್ನಲ್ಲಿ ವ್ಯಾಪ್ತಿಯ ಭಕ್ತಾದಿಗಳಿಗೆ ನೀಡಿದ ಆಶೀರ್ವಾದಕ್ಕೆ ಪ್ರತೀ ತಿಂಗಳಿನಲ್ಲಿ ಆಚರಿಸುವ ನಾನಾ ಕಾರ್ಯಕ್ರಮಗಳೇ ಸಾಕ್ಷಿ ಎಂದರು ಅವರು ಹೇಳಿದರು.
ದೇವರ ಮೇಲೆ ತೋರಿಸಿದ ಪ್ರೀತಿ ಎಂದಿಗೂ ಕರಗಿ ಹೋಗದು. ಅವನು ಯಾವತ್ತೂ ನಮ್ಮೊಂದಿಗಿದ್ದಾನೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅದೃಷ್ಟವನ್ನು ದೇವರು ನನಗೂ ಕರುಣಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೊ ಅವರು, ಈ ವಿಶಿಷ್ಟ ಕಾರ್ಯಕ್ರಮ ಆಯೋ ಜಿಸಿದ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಮಾರ್ಟಿಸ್ ಅವರನ್ನು ಅಭಿನಂದಿಸಿದರು.
ಸಮ್ಮಾನ
ಇದೇ ಸಂದರ್ಭ ಶಿವಮೊಗ್ಗ ಬಿಷಪ್ ಡಾ| ಫ್ರಾನ್ಸಿಸ್ ಸೆರಾವೋ ರವರನ್ನು ಚರ್ಚ್ ಪಾಲನಾ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಮಾರ್ಟಿಸ್ ಸ್ವಾಗತಿಸಿದರು.
ಚರ್ಚ್ನ ಧರ್ಮ ಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ವಂದಿಸಿದರು. ಅರಬ್ ದೇಶದಲ್ಲಿ ಬಹುವರ್ಷ ಉದ್ಯೋಗದಲ್ಲಿದ್ದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ತೋಮಸ್ ಲಸ್ರಾದೋ ಅವರು ಅರಬ್ ವೇಷಭೂಷಣ ಧರಿಸಿ ಕಾರ್ಯಕ್ರಮ ನಿರೂಪಿಸಿದರು. ವಿದೇಶದಲ್ಲಿ ಉದ್ಯೋಗ ದಲ್ಲಿರು ವವರ ಪ್ರಾಯೋಜಕತ್ವದಲ್ಲಿ ಜೆರಿ ಮತ್ತು ಜೆರಿ ನೈಟ್ ಬಳಗದಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.
ನೆನಪಿನ ಕಾಣಿಕೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ ಪ್ರಾಂಶುಪಾಲ ವಂದನೀಯ ಫಾದರ್ ರೋಬರ್ಟ್ ಡಿ’ಸೋಜಾ ಅವರು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವವರ ಕುಟುಂಬದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸಮ್ಮಾನಿಸಿದರು. ವಂದನೀಯ ಫಾದರ್ ಲ್ಯಾನ್ಸಿ ಮತ್ತು ವಿಕ್ಟರ್ ಡಯಾಸ್, ಸಿಸ್ಟರ್ ನ್ಯಾನ್ಸಿ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಉಪಸ್ಥಿತರಿದ್ದರು.