ಸುಬ್ರಹ್ಮಣ್ಯ/ಗುತ್ತಿಗಾರು: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಡಿ. 19ರಿಂದ ಡಿ. 23ರ ತನಕ ನಡೆಯಲಿದೆ.
ಜಾತ್ರೆಯ ಆಮಂತ್ರಣ ಪತ್ರವನ್ನು ದೇವಸ್ಥಾನದಲ್ಲಿ ಹಿರಿಯರಾದ ಗೆಜ್ಜೆ ತಿಮ್ಮಪ್ಪ ಗೌಡ ಅವರು ಶುಕ್ರವಾರ ಬಿಡುಗಡೆ ಮಾಡಿದರು. ಬಳಿಕ ಬೈಲುವಾರು ಸಭೆ ನಡೆಯಿತು. ಸಭೆಯಲ್ಲಿ ಆಮಂತ್ರಣ ಪತ್ರಗಳ ವಿತರಣೆ ಅಭಿಯಾನ, ಚಪ್ಪರ ಮುಹೂರ್ತ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ದೇಗುಲದ ಆಡಳಿತ ಮೊಕ್ತೇಸರ ಎಂ.ವಿ. ಶ್ರೀವತ್ಸ, ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ, ಆರ್ಥಿಕ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಕುಳ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ನ. 24ರಂದು ಚಪ್ಪರ ಮುಹೂರ್ತ, ಡಿ. 12ರಂದು ಗೊನೆ ಮುಹೂರ್ತ, ಡಿ. 18ರಂದು ಹಸುರು ಹೊರೆಕಾಣಿಕೆ ಸಂಗ್ರಹ, 19ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿ ಯಲ್ಲಿ ದರ್ಶನ ಬಲಿ, ಉತ್ಸವ ಹಾಗೂ ಸಂಜೆ ದೈವಗಳ ನೇಮ ನಡೆಯಲಿದೆ.
20ರಂದು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡು ಡಿ. 22ರಂದು ಬ್ರಹ್ಮ ರಥೋತ್ಸವ, 23ರಂದು ದರ್ಶನ ಬಲಿ, ಸಂಜೆ ಅವಭೃಥೋತ್ಸವ ನಡೆಯಲಿದೆ.