ಬೆಳ್ತಂಗಡಿ: ತುಳುನಾಡಿನ ಪ್ರಸಿದ್ಧ ಮೂರು ನಾಗ ಕ್ಷೇತ್ರಗಳಲ್ಲಿ ಒಂದಾಗಿರುವ ಮಚ್ಚಿನ ಗ್ರಾಮದ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ದೇಗುಲದಲ್ಲಿ ವೈಭವದ ಷಷ್ಠಿ ಮಹೋತ್ಸವ ಗುರುವಾರ ನಡೆಯಿತು. ಬೆಳಗ್ಗೆ ಏಳು ಗಂಟೆಯಿಂದಲೇ ವಿವಿಧ ಧಾರ್ಮಿಕ ಕ್ರಿಯೆಗಳೊಂದಿಗೆ ಪ್ರಾರಂಭ ಗೊಂಡು 11 ಗಂಟೆಗೆ ಶ್ರೀ ದೇವರಿಗೆ ಬ್ರಹ್ಮರಥೋತ್ಸವ ನಡೆಯಿತು.
ವಿಶೇಷ ಸೇವೆ
ಉತ್ಸವದ ಪ್ರಯುಕ್ತ ಸಹಸ್ರಾರು ಮಂದಿ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿದ್ದರು. ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಶ್ರೀ ದೇವರಿಗೆ ವಿಶೇಷ ಸೇವೆಗಳನ್ನು ನಡೆಸಲಾಯಿತು. ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಸಹಸ್ರಾರು ಮಂದಿಗೆ ಮಹಾ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಸಂಜೆ ಅತ್ತಾಳ ಪೂಜೆ, ದರ್ಶನ ಬಲಿ ಉತ್ಸವ ನಡೆಯಿತು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯ ಬಂಗಳಾಯಿ, ಸಂಜೀವ ಶೆಟ್ಟಿ ಮುಗೆರೋಡಿ, ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ| ಎಂ. ಹರ್ಷ ಸಂಪಿಗೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಪಲ್ಲಕ್ಕಿ ಉತ್ಸವ, ಅಂಗಣ ಬಂಡಿ ಉತ್ಸವ
ಷಷ್ಠಿà ಹಿಂದಿನ ದಿನ ಪಂಚಮಿಯ ಅಂಗವಾಗಿ ಶ್ರೀ ದೇವರಿಗೆ ಪಲ್ಲಕ್ಕಿ ಉತ್ಸವ ಅಂಗಣ ಬಂಡಿ ಉತ್ಸವ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬಳ್ಳಮಂಜ ವೀರಸಕೇಸರಿ ಬಳಗದ ವತಿಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಉಚಿತ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಡಿ. 14 ರಂದು ಮಹಾಸಂಪ್ರೋಕ್ಷಣೆ ನಡೆಯಲಿದೆ.