ಹೊಲಗದ್ದೆ ಇರುವ ನಮ್ಮ ಮನೆಯಲ್ಲಿನ ಮಹಿಳೆಯರು ಬೆಳಗ್ಗೆ 4 ಗಂಟೆಗೆ ಎದ್ದು ನೀರನ್ನು ತುಂಬಿಸುವ ದೊಡ್ಡ ಅಂಡೆಯನ್ನು (ಗುರ್ಕೆ) ಅದಕ್ಕೆ ಸೌತೆಕಾಯಿಯ ಬಳ್ಳಿಯಿಂದ ಸುತ್ತಿ ಸಿಂಗರಿಸಿ, ಮಣ್ಣಿನ ಮಡಕೆಯಿಂದಲೇ ಬಾವಿಯಿಂದ ನೀರನ್ನು ಸೇದಿ ತುಂಬಿಸಿ ಬಿಸಿ ಮಾಡಲಾಗುತ್ತದೆ.
ಮನೆಯಲ್ಲಿದ್ದ ಮಕ್ಕಳ ಸಹಿತ ಎಲ್ಲರೂ ಸಹ ಸೂರ್ಯ ಸರಿಯಾಗಿ ಕಾಣುವ ಮೊದಲೇ ಗಾಣದಿಂದ ತೆಗೆದ ತೆಂಗಿನ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೂ. ಅಂದು ಬೆಳಗಿನ ಉಪಾಹಾರವಾಗಿ ಅವಲಕ್ಕಿಯನ್ನು ಬೆಲ್ಲದೊಂದಿಗೆ ಹದ ಮಾಡಿದ ತಿನಸೇ ಅಂದಿನ ಸಿಹಿ. ಗಂಡಸರು ಗದ್ದೆಗೆ ತೆರಳಿದರೇ ಮಹಿಳೆಯರು ಮನೆಯ ಅಂಗಣವನ್ನು ಸೆಗಣಿಯ ಮೂಲಕ ಸಾರಿಸಿ, ಮನೆಯ ಗೋವಿನ ಕೊಟ್ಟಿಗೆಯನ್ನು ಸಹ ಸ್ವತ್ಛಗೊಳಿಸಲಾಗುತ್ತದೆ. ಬೇಸಾಯಕ್ಕೆ ಬಳಸುವ ಎಲ್ಲ ಪರಿಕರಗಳನ್ನು ಸಹ ಶೃಂಗರಿಸಲಾಗುತ್ತದೆ ಎಂದು ದೀಪಾವಳಿಯ ಸಂದರ್ಭದಲ್ಲಿ ಹಿಂದಿನಿಂದಲೂ ಪರಂಪರೆಯಾಗಿ ಆಚರಿಸಿಕೊಂಡು ಬಂದಿರುವ ಬಲಿಪಾಡ್ಯದ ಬಗ್ಗೆ ತೋಕೂರಿನ ಮದ್ದೇರಿ ಗುತ್ತುವಿನ 70ರ ಹರೆಯದ ರಮಣಿ ಪೂಜಾರಿ “ಉದಯವಾಣಿ’ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಂಗಣದ ಸುತ್ತಲೂ ತೆಂಗಿನ ಗೆರೆಟೆಗೆ ಎಣ್ಣೆ ಹಾಕಿ ದೀಪದ ಸಾಲುಗಳನ್ನು ಇಡಲಾಗುತ್ತದೆ. ಸಂಜೆಯಾಗುವಾಗ ಮಕ್ಕಳು, ಗಂಡಸರು ಗದ್ದೆಗೆ ತೆರಳುತ್ತಾರೆ. ಕಂಬಳದ ಗದ್ದೆಯಾದಲ್ಲಿ ದೊಂದಿಯನ್ನು ಹೊತ್ತಿಸುತ್ತಾರೆ. ಬಾಕಿ ಗದ್ದೆಗಳಲ್ಲಿ ತೆಂಗಿನಕಾಯಿ, ಅವಲಕ್ಕಿ, ಎಲೆ, ಅಡಿಕೆಯೊಂದಿಗೆ ಮೂರು ಎಲೆಯ ಕುರಿr ಹೂವನ್ನು ಗದ್ದೆಯಲ್ಲಿಟ್ಟು ಬಲೀಂದ್ರನನ್ನು ಪಾಡªನ ಮೂಲಕ ಕಥೆ ಹೇಳಿ ಕೊನೆಗೆ ಮೂರು ಬಾರಿ ಬಾ ಬಲೀಂದ್ರ ಕೂ. ಕೂ. ಕೂ ಎಂದು ಕರೆದು ನಂತರ ಮನೆಯಲ್ಲಿನ ಹಟ್ಟಿಗೆ ತೆರಳಿ ಗೋವಿನ, ಬೇಸಾಯಕ್ಕೆ ಬಳಸುವ ಪರಿಕರಿಗಳಿಗೆ ಪೂಜೆಯಾಗುತ್ತದೆ. ಈ ಸಂದರ್ಭ ಗೋವನ್ನು ಸಹ ಶೃಂಗರಿಸಲಾಗಿರುತ್ತದೆ. ಅದಕ್ಕೆ ಯಥೇಚ್ಚವಾಗಿ ಮನೆಯಲ್ಲಿ ಅಕ್ಕಿಯಿಂದ ತಯಾರಿಸಿದ ಗಟ್ಟಿ ಹಾಗೂ ಅವಲಕ್ಕಿಯನ್ನು ನೀಡಲಾಗುತ್ತದೆ ಎಂದು ರಮಣಿ ಪೂಜಾರಿ ಮಾಹಿತಿ ನೀಡುತ್ತಾರೆ.