Home ಧಾರ್ಮಿಕ ಸುದ್ದಿ ಬಜಕೂಡ್ಲು ದೇವಳ: ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಬಜಕೂಡ್ಲು ದೇವಳ: ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

572
0
SHARE

ಬದಿಯಡ್ಕ: ಪ್ರಕೃತಿ ಮತ್ತು ಜೀವಸಂಕುಲಗಳ ಸಂಬಂಧಗಳು ಪರಸ್ಪರ ಪೂರಕವಾಗಿರುವುದನ್ನು ನಮ್ಮ ಹಿರಿಯರು ಪ್ರಾಚೀನ ಕಾಲ ದಿಂದಲೇ ಗುರುತಿಸಿರುವುದು ಜ್ಞಾನ ಶ್ರೀಮಂತಿಕೆಯ ಸಂಕೇತವಾಗಿದೆ. ಸಸ್ಯಗಳ ಮಹತ್ವವನ್ನು ಅರಿತು ಅವು ಗಳಲ್ಲಿ ಪೂಜನೀಯತೆ ಕಂಡು ಕೃತಾರ್ಥ ರಾಗಿರುವುದರ ಮರ್ಮ ನಮಗೆ ಈಗಷ್ಟೆ ಅರಿವಾಗುತ್ತಿದ್ದು, ಪ್ರಕೃತಿಯೊಂದಿಗಿನ ಒಡನಾಟ ಶ್ರೇಯಸ್ಕರ. ಆದ್ದರಿಂದಲೆ ರುದ್ರನ ಪ್ರೀತ್ಯರ್ಥವಾಗಿ ಹಲವು ಗುಣಗಳ ಬಿಲ್ವವನ್ನು ಅರ್ಪಿಸುತ್ತೇವೆ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನವಿತ್ತರು.

ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ವೇ|ಮೂ| ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ಜುಲೈ 12 ರಂದು ನಡೆಯಲಿರುವ ಲಕ್ಷಾರ್ಚನೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನಗೈದು ಶ್ರೀಗಳು ಮಾತನಾಡಿದರು.

ಬಿಲ್ವ ಶಿವನಿಗೆ ಪ್ರಿಯವಾದುದು. ಅದರ ಸಮರ್ಪಣೆ ಮಾಡಿದರೆ ಜಪ ಮಾಡಿದ ಫಲ ಸಿಗುವುದು. ಯಾರೇ ಶಿವನಿಗೆ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ ಬಿಲ್ವ ಪತ್ರೆ ಅರ್ಪಿಸಿದರೂ ಆ ವ್ಯಕ್ತಿಯ ಬೇಡಿಕೆ ಈಡೇರುವುದು. ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು ಶಿವನಿಗೆ ಸಮರ್ಪಣೆ ಮಾಡುವುದರಿಂದ ಸಮಸ್ತ ಲೋಕ ಕಲ್ಯಾಣವಾಗುವುದು ಎಂದ ಶ್ರೀಗಳು ಪ್ರಾರ್ಥನೆ, ಪೂಜಾದಿಗಳ ಆಂತರಂಗಿಕ ಮೌಲ್ಯಗಳಿಗೆ ಮನ್ನಣೆ ನೀಡುವ ಮನಸ್ಸು ಎಲ್ಲರಿಗೂ ಬರಲಿ ಎಂದು ಹರಸಿದರು.

ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೃಷ್ಣ ಶ್ಯಾನುಭೋಗ್‌ ಅಧ್ಯಕ್ಷತೆ ವಹಿಸಿದ್ದರು. ಲಕ್ಷಾರ್ಚನೆ ಪೂರ್ವಭಾವಿ ಸಿದ್ಧತೆ, ಉಳ್ಳಾಕ್ಲು (ರಾಜನ್‌ ದೈವ) ಮತ್ತು ಮೂಲ ತರವಾಡು ಕೆಲಸ ಕಾರ್ಯಗಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ಉದಯ ಚೆಟ್ಟಿಯಾರ್‌ ಬಜಕೂಡ್ಲು, ಕಾನ ವೆಂಕಟ್ರಮಣ ಭಟ್‌, ಗೋಪಾಲ ಕೃಷ್ಣ ಭಟ್‌, ರಾಮಕೃಷ್ಣ ಭಟ್‌ ಸರ್ಪಂಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here