Home ನಂಬಿಕೆ ಸುತ್ತಮುತ್ತ ಕಳೆಂಜನ ನರ್ತನ, ಬೇಡನ ಕುಣಿತ, ಅಮಾವಾಸ್ಯೆಯ ಕಷಾಯ ಆಟಿಯ ವಿಶೇಷತೆ

ಕಳೆಂಜನ ನರ್ತನ, ಬೇಡನ ಕುಣಿತ, ಅಮಾವಾಸ್ಯೆಯ ಕಷಾಯ ಆಟಿಯ ವಿಶೇಷತೆ

ತುಳುನಾಡಿನ ಪೊರ್ಲು ಆಟಿ(ಆಷಾಢಾ) ತಿಂಗಳು

2872
0
SHARE

ಅಖೀಲೇಶ್‌ ನಗುಮುಗಂ
ಬದಿಯಡ್ಕ:
ಆರ್ಥಿಕವಾಗಿ ಬಡತ ನವಿದ್ದರೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾದ ತುಳುವರ ಅತಿ ಮಹತ್ವದ ತಿಂಗಳು ಆಟಿ. ಹತ್ತಾರು ಆಚರಣೆಗಳು, ನಂಬಿಕೆಗಳು, ವೈವಿಧ್ಯಮಯ ತಿಂಡಿ ತಿನಿಸುಗಳಿಗೆ ಆಟಿ ಹೆಸರಾಗಿದೆ. ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಶುಭ ಕಾರ್ಯಗಳಿಗೆ ಹೇಳಿದ್ದಲ್ಲ. ಯಾವುದೇ ಬೆಳೆಗಳನ್ನು ಬೆಳೆಯಲಾಗದ, ಕೂಡಿಟ್ಟ ಧಾನ್ಯಗಳು ಖಾಲಿಯಾಗುವ ಕಾಲ. ಆದುದರಿಂದಲೇ ಪ್ರಕೃತಿಯಲ್ಲಿ ಆಹಾರಕ್ಕಾಗಿ ಅರಸುತ್ತಿದ್ದ ಹಿಂದಿನ ನಮ್ಮ ಹಿರಿಯರು ಮತ್ತು ಪ್ರಕೃತಿ ನಡುವೆ ಅವಿನಾಭಾವ ಸಂಬಂಧವೊಂದು ಬೆಸೆದುಕೊಂಡಿತು.

ಆಟಿ ಅಮಾವಾಸ್ಯೆ
ಆಟಿ ಅಮಾವಾಸ್ಯೆಗೆ ತುಳುನಾಡಲ್ಲಿ ಬಹಳಷ್ಟು ಮಹತ್ವವಿದೆ. ಹಾಲೆ ಮರದ ತೊಗಟೆಯ ಕಷಾಯವೆಂದೇ ಕರೆಯಲ್ಪಡುವ ಮರದ ಹಾಲನ್ನು ಸವಿಯುವ ಸಂಭ್ರಮ. ಸೂರ್ಯೋದಯಕ್ಕೂ ಮುನ್ನ ಗಂಡಸರು ಬೆತ್ತಲೆಯಾಗಿ ಹಾಲೆಯ ಮರದ ಬಳಿ ಹೋಗಿ ಕಲ್ಲಿನಿಂದ ಜಜ್ಜಿ ತೆಗೆದ ತೊಗಟೆಯನ್ನು ತಂದು ಮಾಡಿದ‌ ಕಷಾಯದಲ್ಲಿ ಸಾವಿರದೊಂದು ಬಗೆಯ ಔಷಧಗಳು ಇದೆ ಎಂಬ ನಂಬಿಕೆ. ಹಾಗೆಯೇ ತೀರ್ಥ ಸ್ನಾನ ಮಾಡುವುದು ಕೂಡಾ ವಿಶೇಷ. ಪ್ರಸಿದ್ಧ ಕ್ಷೇತ್ರಗಳ ವಿಶೇಷ ಕೆರೆಗಳಲ್ಲಿ ಮತ್ತು ಸಮುದ್ರದಲ್ಲಿ ಈ ದಿನದಂದು ವಿಶೇಷ ತೀರ್ಥಗಳು ಸೇರಿರುತ್ತದೆ ಎಂಬುದು ನಂಬಿಕೆ.

ಆಟಿ ಕುಲ್ಲುನಿ
ಗಂಡನ ಮನೆಯಲ್ಲಿ ಬೆವರು ಸುರಿಸಿ ದುಡಿಬ ಹೆಣ್ಣಿಗೆ ದೈಹಿಕ ಮಾನಸಿಕ ಚೇತರಿಕೆಗೆ ಅನುಕೂಲವಾಗುವ ಪದ್ಧತಿಯೇ ಆಟಿ ಕುಲ್ಲುನಿ. ಒಂದಷ್ಟು ದಿನ ತವರು ಮನೆಯ ಸವಿಯುಂಡು ಸಂಭ್ರಮಿಸುವ ಕಾಲ.

ಮಾರಿ ಕಳೆಯುವ ಆಟಿ ಕಳೆಂಜ, ಬೇಡನ್‌ ತೈಯ್ಯಂ
ರೋಗ ರುಜಿನಗಳು ಹೆಚ್ಚಾಗಿರುವ ಕಾಲದಲ್ಲಿ ಊರಿಗೆ ಹಿಡಿದಿರುವ ಸಕಲ ದೋಷಗಳನ್ನು ಓಡಿಸುವ ಸಲುವಾಗಿ ಆಟಿ ದೈವಗಳು ಪ್ರತ್ಯಕ್ಷವಾಗುತ್ತವೆ. ಆಟಿಕೆಳಂಜ. ಕೇರಳದ ಬೇಡ, ಕನ್ಯಾಪು, ಮರ್ದ ಮೊದಲಾದ ದೈವಗಳು ತುಳುನಾಡಿನಲ್ಲಿ ಸಂಚರಿಸಿ ಮಾರಿ ಕಳೆಯುವ ಕಾರ್ಯ ಮಾಡುತ್ತವೆ. ಆಟಿ ತಿಂಗಳ ಮೊದಲ ದಿನ ದೇಗುಲಗಳಿಗೆ ಭೇಟಿ ನೀಡಿದ ನಂತರ ಮನೆ ಮನೆ ಸಂದರ್ಶಿಸುತ್ತಾರೆ. ಸಾಂಪ್ರದಾಯಿಕ ವೇಷ-ಭೂಷಣಗಳಿಂದ ಕೊಂಚ ವ್ಯತ್ಯಸ್ತವಾದ ವೇಷಭೂಷಣಗಳಲ್ಲಿ ಕಾಣಿಸಿಕೊಳ್ಳುವ ಆಟಿಕೆಳಂಜ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವತ್ತಾನೆ. ಊರೆಲ್ಲಾ ಸಂಚರಿಸಿ ಜನರ ಕಷ್ಟಗಳನ್ನು ದೂರಮಾಡುತ್ತಾನೆ. ತೆಂಬರೆಯ ನಾದ, ಓಲೆಯ ಕೊಡೆ ಹಿಡಿದು ಬರುವ ಕಳಂಜನನ್ನು ನೋಡುವುದೇ ಒಂದು ಆನಂದ. ಕಳೆಂಜ ಎಂದರೆ ಪುಟ್ಟ ಬಾಲಕ, ದುಷ್ಟಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ. ಸೊಂಟಕ್ಕೆ ತೆಂಗಿನ ಗರಿ, ಕಾಲಿಗೆ ಗಗ್ಗರ, ಕೆಂಪು ಅರಿವೆ, ಕೈಗೆ ಮೈಗೆ ಮುಖಕ್ಕೆ ಬಣ್ಣದ ಜತೆಗೆ ಹಾಳೆಯಿಂದ ಮಾಡಿದ ಕಿಸಗಾರ ಹೂಗಳಿಂದ ಸಿಂಗರಿಸಿದ ಟೊಪ್ಪಿಗೆ ಆಟಿಕಳೆಂಜನ ವೇಷ. ಮೂಡಣದ ಮಾರಿಯನ್ನು ಮೂಡಣದೂರಿಗೆ ಸಾಗಿಸುವ ಮನುಷ್ಯರಿಗೂ, ಪ್ರಾಣಿಗಳಿಗೂ ಬರುವ ಕಾಯಿಲೆಗಳನ್ನು ನಿವಾರಣೆ ಮಾಡುವ ಮಾಂತ್ರಿಕ ಕಳೆಂಜ ಎನ್ನುವುದು ತುಳುವರ ನಂಬಿಕೆ.

ಆಟಿಯ ಆಟಗಳು
ದುಡಿಮೆಗೆ ವಿರಾಮ ದೊರಕುವ ಈ ಮಾಸದಲ್ಲಿ ತುಳುನಾಡಲ್ಲಿ ಹಿಂದೆ ಆಟಗಳಿಗೂ ಸ್ಥಾನ ನೀಡಲಾಗಿತ್ತು. ಚೆನ್ನೆಮಣೆ, ಒಗಟು ಬಿಡಿಸುವುದು, ಸರಿಮುಗುಳಿ ಆಟಗಳಲ್ಲದೆ, ಪಾಡ್ದನ, ಜಾನೊದ ಗೀತೆಗಳ ಗಾಯನವೂ ಸಾಮಾನ್ಯವಾಗಿತ್ತು.

ಸತ್ತವರಿಗೆ ಬಡಿಸುವುದು
ಆಷಾಢಾದಲ್ಲಿ ಹೆಚ್ಚಿನ ಮನೆಗಳಲ್ಲೂ ನಮ್ಮನ್ನಗಲಿದವರನ್ನು ನೆನಪಿಸಿಕೊಂಡು ವಿವಿಧ ಆಹಾರ ಪದಾರ್ಥಗಳನ್ನು ಕಾಳಜಿಯಿಂದ ಶುದ್ಧಿಯಿಂದ ತಯಾರಿಸಿ ರಾತ್ರಿ ಹೊತ್ತಲ್ಲಿ ಮನೆ ಮಂದಿಯೆಲ್ಲ ಒಟ್ಟುಸೇರಿ ವಲೆಯಲ್ಲಿ ತಿಂಡಿ ತಿನಿಸುಗಳನ್ನು ಬಡಿಸಿ ಪ್ರಾರ್ಥನೆ ಸಲ್ಲಿಸುವ ಆಚರಣೆಯೂ ಇದೆ. ಇದನ್ನು ಸತ್ತವರಿಗೆ ಬಡಿ ಸುವುದು ಎನ್ನಲಾಗುತ್ತದೆ. ಅಗಲಿದ ಆತ್ಮಗಳ ಸಂತೃಪ್ತಿಗಾಗಿ ಇದನ್ನು ಮಾಡಲಾಗುತ್ತದೆ.

ನಾಗರ ಪಂಚಮಿ
ಆಟಿ ತಿಂಗಳ ಕೊನೆಯಲ್ಲಿ ಬರುವ ಆಚರಣೆಯೇ ನಾಗರ ಪಂಚಮಿ. ಹಬ್ಬಗಳ ಪ್ರಾರಂಭಕ್ಕೆ ನಾಂದಿ ಹಾಡುವುದು ಇಲ್ಲಿಂದಲೇ. ಕೇದಗೆ, ಸಂಪಿಗೆ, ಪಿಂಗಾರ ಜತೆ ಮಲ್ಲಿಗೆಯ ಪರಿಮಳವೂ ಹಾಲಿನ ಪವಿತ್ರತೆಯೂ ಹರಿವ ನೀರಲಿ ಕಡಲು ಸೇರಿ ಜಗದ ರಕ್ಷಕ ನಾಗನ ಆಶೀರ್ವಾದದಿಂದ ಮಳೆ,ಬೆಳೆ ಚೆನ್ನಾಗಿ ಆಗಿ ನೆಮ್ಮದಿಯ ಬದುಕಿಗಾಗಿ ಪ್ರಾರ್ಥಿಸಿ ಅನುಗ್ರಹ ಪಡೆಯುವ ಶುಭ ಸಂದರ್ಭ. ಆದರೆ ಕಾಲದೊಂದಿಗೆ ಹಲವಾರು ಆಚರಣೆಗಳು ಬದಲಾಗಿವೆ ಇಲ್ಲವೇ ಮರೆಯಾಗಿವೆ. ಹಳ್ಳಿಯ ಸೊಬಗು ಪಟ್ಟಣದ ಮಾಯೆಯಲ್ಲಿ ಮರೆಯಾಗಿರುವುದನ್ನೂ ಅಲ್ಲಗಳೆಯುವಂತಿಲ್ಲ.

ಆಟಿದ ಅಟಿಲ್(ಅಡುಗೆ)
ಕೆಸುವಿನ ಎಲೆಯ ಪತ್ರೊಡೆ, ನುಗ್ಗೆ ಸೊಪ್ಪಿನ ಜತೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಹಲಸಿನ ಬೀಜ ಸೇರಿಸಿದ ಪಲ್ಯ, ಬುದ್ಧಿಯ ಬೆಳವಣಿಗೆಗೆ ಚಿಮರೆ (ಒಂದೆಲಗ) ಚಟ್ನಿ, ಕಿರಾತ ಕಡ್ಡಿಯ ಕಷಾಯದ ಕಹಿ, ತಜಂಕ್‌ ಪಲ್ಯ, ಮಾವಿನ ಗೊಜ್ಜು ಪಲ್ಯ, ಹಳಸಿನ ಸೊಳೆ(ಉಪ್ಪಡ್‌ ಪಚ್ಚಿಲ್), ಮಿಡಿ ಉಪ್ಪಿನಕಾಯಿ, ಕಣಿಲೆ(ಎಳೆ ಬಿದಿರು ಪಲ್ಯ), ಹಪ್ಪಳಗಳ ಸವಿ, ಹುರಿದ ಹುಣಿಸೇ ಬೀಜ, ಸಾಂತಾನಿ(ಒಣಗಿಸಿದ ಹಲಸಿನ ಬೀಜ) ರುಚಿಯೊಂದಿಗೆ ಮೆಂತೆ ಗಂಜಿ, ಮೆಂತೆ ಮಣ್ಣಿ(ಆಲೂಬಾಯಿ), ಹೆಸರು ಗಂಜಿ, ಕೊತ್ತಂಬರಿ ಗಂಜಿ ಸೇರಿದಂತೆ ವಿವಿಧ ತರದ ಕಷಾಯಗಳು ತುಳುಜನರ ಹಸಿವಿಗಿರುವ ಅಮೃತ ಸಮಾನ ತಿನಿಸುಗಳು.

ಇಂದು ಎಲ್ಲವೂ ಬದಲಾಗಿದೆ
ನಾವು ಚಿಕ್ಕವರಿದ್ದಾಗ ಬಡತನ ತಾಂಡವವಾಡುತ್ತಿತ್ತು. ಆದುದರಿಂದಲೇ ಹಲಸಿನ ತಿಂಡಿ ತಿನಿಸುಗಳೊಂದಿಗೆ ಪ್ರಕೃತಿದತ್ತವಾದ ವಸ್ತುಗಳನ್ನೇ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಆಚರಣೆಗಳಿಗೂ ಅಷ್ಟೇ ಮಹತ್ವವಿದ್ದು ಆಟಿಕಳೆಂಜನಿಗೂ ಪ್ರಾಧಾನ್ಯತೆ ಹೆಚ್ಚಿತ್ತು. ಹನಿಬಿಡದೆ ದಿನಗಳ ಕಾಲ ಸುರಿಯುವ ಮಳೆಗೆ ಮನೆಯಿಂದ ಹೊರಗಡಿಯಿಡಲಾಗುತ್ತಿರಲಿಲ್ಲ. ಇಂದು ಎಲ್ಲವೂ ಬದಲಾಗಿದೆ.
– ನಿಟ್ಟೋಣಿಶತಾಯುಷಿ, ದೈವ ನರ್ತಕ

LEAVE A REPLY

Please enter your comment!
Please enter your name here