ಪಡುಬಿದ್ರಿ : ಇಂದು ಹಿಂದೂ ಸಂಸ್ಕೃತಿ, ಹಿಂದೂ ಧರ್ಮ ಉಳಿದಿದ್ದರೆ ಅದಕ್ಕೆ ದೇಶದ ಬಡಜನರು ಮತ್ತು ಬಡವರ ದೈವ- ದೇವಸ್ಥಾನಗಳೇ ಕಾರಣ. ಇವು ಭಕ್ತಿ ಭಜನೆಗೆ ಸೀಮಿತವಾಗದೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿ ಕಾರ್ಯಾಚರಿಸಬೇಕು ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಹೇಳಿದರು.
ಹೆಜಮಾಡಿ ಮೊಗವೀರ ಮಹಾಸಭಾ ಆಡಳಿತದ ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಮಂಗಳವಾರ ಶ್ರೀ ಬಬ್ಬರ್ಯ ದೈವದ ಬ್ರಹ್ಮಕಲಶಾಭಿಷೇಕ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚಿಸಿದರು.
ಧರ್ಮ ಜಾಗೃತಿಯಾಗಲಿ
ಕೇವಲ ಭಕ್ತಿಯಿಂದ ಯಾವುದೂ ಸಾಧ್ಯವಿಲ್ಲ. ಜ್ಞಾನಯುಕ್ತ ಭಕ್ತಿಯ ಅಗತ್ಯವಿದೆ. ಅದಕ್ಕಾಗಿ ಎಲ್ಲರಿಗೂ ಶಾಸ್ತ್ರಾಧ್ಯಯನಕ್ಕೆ ಅವಕಾಶ ಮಾಡಿ ಕೊಟ್ಟು, ಹಿಂದೂ ಧರ್ಮಜಾಗೃತಿಗೆ ಕಾರಣೀಭೂತರಾಗಬೇಕು ಎಂದರು.
ಬ್ರಹ್ಮಕಲಶಾಭಿಷೇಕವು ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿ, ಹೆಜಮಾಡಿ ರಂಗಣ್ಣ ಭಟ್ಟರ ನೇತೃತ್ವದಲ್ಲಿ ನಡೆಯಿತು. ಸಮಾರಂಭ ಉದ್ಘಾಟಿಸಿದ ದ. ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಎಚ್. ಗಂಗಾಧರ ಕರ್ಕೇರ ಮಾತನಾಡಿ, ಸಹಕಾರ ನೀತಿ ಎಂಬುದು ಮೊಗವೀರರ ಆಸ್ತಿ. ಕೂಡುಕಟ್ಟು, ಪರಂಪರೆಗಳಿಂದ ಅವಿದ್ಯಾವಂತರಾಗಿದ್ದರೂ ನಮ್ಮ ಹಿರಿಯರು ಜ್ಞಾನವಂತರಾಗಿದ್ದರು ಎಂದರು.
ಹಿರಿಯರಾದ ದೀನನಾಥ ಸಾಲ್ಯಾನ್, ದಾನಿ ಹಾಗೂ ಉದ್ಯಮಿ ದಯಾನಂದ ಹೆಜ್ಮಾಡಿ ಅವರನ್ನು ಸಮ್ಮಾನಿಸಲಾಯಿತು.
ಶ್ರೀ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗುರಿಕಾರ, ಹೆಜಮಾಡಿ ಮೊಗವೀರ ಮಹಾಸಭಾ ಅಧ್ಯಕ್ಷ ಜಗನ್ನಾಥ ಕುಂದರ್, ಮುಂಬೆ„ ಸಮಿತಿಯ ಅಧ್ಯಕ್ಷ ಕರುಣಾಕರ ಹೆಜ್ಮಾಡಿ, ಮಹಿಳಾ ಸಭಾ ಅಧ್ಯಕ್ಷೆ ಪಾರ್ವತಿ ಪಿ. ಕರ್ಕೇರ, ಗುರಿಕಾರ ರಾಘವ ಗುರಿಕಾರ, ಹೆಜಮಾಡಿ ರಂಪಣಿ ಫಂಡ್ ಆಡಳಿತ ಪಾಲುದಾರ ನಾರಾಯಣ ಕೆ. ಮೆಂಡನ್,ಅರ್ಚಕರಾದ ವೇ| ಮೂ| ರಂಗಣ್ಣ ಭಟ್, ವಾಸು ಕೆ. ಕೋಟ್ಯಾನ್ ಕಣ್ಣಂಗಾರು ಮುಖ್ಯ ಅತಿಥಿಗಳಾಗಿದ್ದರು. ಪುರುಷೋತ್ತಮ ಗುರಿಕಾರ ಪ್ರಸ್ತಾವಿಸಿದರು. ಕೀರ್ತನ್ ಎಸ್. ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.