Home ಧಾರ್ಮಿಕ ಸುದ್ದಿ ಅಯೋಧ್ಯೆಯಲ್ಲಿ ಈಗ ಭಕ್ತಿ,ಪುಳಕ ; ರಾಮಲಲ್ಲಾನಿಗೆ ವಿಶೇಷ ಅಲಂಕಾರ

ಅಯೋಧ್ಯೆಯಲ್ಲಿ ಈಗ ಭಕ್ತಿ,ಪುಳಕ ; ರಾಮಲಲ್ಲಾನಿಗೆ ವಿಶೇಷ ಅಲಂಕಾರ

211
0
SHARE

ಅಯೋಧ್ಯೆ/ಹೊಸದಿಲ್ಲಿ: ಹನುಮಾನ್‌ ಗಾರ್ಹಿಯಲ್ಲಿ ಭಕ್ತರ ತುಂಬಿದ ಉತ್ಸಾಹ, ಎಲ್ಲೆಡೆ ಭಕ್ತಿ, ಪುಳಕದ ವಾತಾವರಣ… ಇದು ರವಿವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಅಯೋಧ್ಯೆಯಲ್ಲಿ ಕಂಡು ಬಂದ ವಾತಾವರಣ. ತೀರ್ಪಿನ ಅನಂತರ ಏನಾಗಲಿ ದೆಯೋ ಎಂಬ ಆತಂಕದ ವಾತಾವರಣ ಇದ್ದರೂ, ಹನುಮಾನ್‌ ಗಾರ್ಹಿ, ನಯಾ ಘಾಟ್‌ಗಳಲ್ಲಿ ಭಕ್ತ ಜನರ ಉತ್ಸಾಹಕ್ಕೇನೂ ಭಂಗವಾಗಲಿಲ್ಲ. ಬೆಳಗ್ಗಿನಿಂದಲೂ ದೇಗುಲಗಳ ನಗರಿಯಲ್ಲಿ ಭಕ್ತಿಯ ವಾತಾವರಣ ಇತ್ತು.

ಸಂಜೆಯಾಗುತ್ತಿದ್ದಂತೆಯೇ ವಿವಿಧ ದೇಗುಲಗಳಲ್ಲಿ ಭಜನೆ, ಕೀರ್ತನೆಗಳ ಝೇಂಕಾರ ಕಿವಿ ತುಂಬಲಾ ರಂಭಿಸಿತ್ತು. ಇವೆಲ್ಲದರ ನಡುವೆಯೇ ಉತ್ತರ ಪ್ರದೇಶ ಮತ್ತು ಕೇಂದ್ರ ಸರಕಾರದ ಭದ್ರತಾ ಪಡೆ ಗಳು ಗಸ್ತು ತಿರುಗಿ ಶ್ರದ್ಧಾಳುಗಳಿಗೆ ಇನಿತೂ ತೊಂದರೆಯಾಗದಂತೆ ನೋಡಿಕೊಂಡರು. ರಾಮ ಲಲ್ಲಾ ದೇಗುಲದ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಶ್ರೀರಾಮನ ಮೂರ್ತಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಅಲಂಕಾರ ಮಾಡಿದ್ದರು. ಆಯೋಧ್ಯೆಯ ಋಕಬ್‌ಗಂಜ್‌ ಮತ್ತು ಇತರ ಭಾಗಗಳಲ್ಲಿ ಜನರು ಬೆಳಗ್ಗಿನಿಂದಲೇ ವಿವಿಧ ಪತ್ರಿಕೆಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಇರುವ ಸುದ್ದಿಗಳನ್ನು ಓದಿ ಚರ್ಚೆ ನಡೆಸುತ್ತಿದ್ದರು.

ಹನುಮಾನ್‌ ಗಾರ್ಹಿ ದೇಗುಲದ ಆಸುಪಾಸಿನಲ್ಲಿರುವ ಮಳಿಗೆಗಳ ಮಾಲೀಕರು ಮತ್ತು ಸಿಬಂದಿ ಕೂಡ ತೀರ್ಪಿನ ಬಗ್ಗೆ ಮೆಚ್ಚುಗೆ, ನಿರಾಳ ಭಾವ ವ್ಯಕ್ತಪಡಿಸಿದರು. ‘ರಾಮ ಲಲ್ಲಾನ ಪರವಾಗಿ ತೀರ್ಪು ಪ್ರಕಟವಾದ ಬಳಿಕ ಮಳಿಗೆಯಲ್ಲಿ ಸಿಹಿ ತಿನಿಸುಗಳು ಮತ್ತು ಪುಷ್ಪ ಮಾಲಿಕೆಗಳ ಕೊರತೆ ಉಂಟಾಗಿದೆ. ಇನ್ನು ಮುಂದೆ ಅಯೋಧ್ಯೆ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ’ ಎಂದು ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ. ಇಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರು ಹೆಮ್ಮೆಯ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜೈಪುರದ ಅವಧೇಶ್‌ ಶರ್ಮಾ ಮತ್ತು ಕಾಜೋರ್ಮಾಲ್‌ ಶರ್ಮಾ ತೀರ್ಪಿನ ಬಳಿಕ ಅಯೋಧ್ಯೆಗೆ ಆಗಮಿಸಿ ದೇವರನ್ನು ವೀಕ್ಷಿಸಿದ್ದು ಪುನೀತರಾದ ಭಾವನೆ ಹೊಂದಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಭಿವಾಂಡಿಯಿಂದ 55 ಮಂದಿ ಪ್ರವಾಸಿಗರ ಜತೆಗೆ ಆಗಮಿಸಿದ್ದ ಗಣೇಶ್‌ ತಾರೆ ಕೂಡ ತೀರ್ಪಿನ ಬಗ್ಗೆ ಹೆಮ್ಮೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here