Home ನಂಬಿಕೆ ಸುತ್ತಮುತ್ತ ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ

ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ

4473
0
SHARE

ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದೇ ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂಥ ಶಾಂತಿಪ್ರಿಯರ ನಗರ ಎಂಬ ಕಾರಣಕ್ಕೆ ಅಯೋಧ್ಯೆ ಎಂಬ ಹೆಸರಿನಿಂದ ಕರೆಯಲಾಯಿತು. ಮಾನವೇಂದ್ರನಾದ ಮನುವಿನಿಂದಲೇ ನಿರ್ಮಿತವಾದ ನಗರ ಅಯೋಧ್ಯೆ ಎಂದು ವಾಲ್ಮೀಕಿಯವರು ಬಣ್ಣಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋ ಸೇವೆಯ ಆದರ್ಶವನ್ನು ಜಗದೆದುರು ಮಂಡಿಸಿದ ತಾಣ. ಇಕ್ಷಾಕು ವಂಶವನ್ನು ರಘುವಂಶವನ್ನಾಗಿಸಿದ ರಾಜಾ ರಘುವಿನ ರಾಜಧಾನಿ. ದಶರಥನು ಋಷ್ಯಶೃಂಗರ ನೇತೃತ್ವದಲ್ಲಿ ಪುತ್ರಕಾಮೇಷ್ಠಿ ಯಜ್ಞವನ್ನು ನಡೆಸಿದ ಸ್ಥಳ.

ಅಯೋಧ್ಯೆಯಲ್ಲಿ ಕಾಲಿರಿಸುತ್ತಾ ಇದ್ದಂತೆ ಮನಸ್ಸು ಯುಗಾಂತರಕ್ಕೆ ಧಾವಿಸುತ್ತದೆ. ಅಜ- ಇಂದುಮತಿಯರ ವಿವಾಹವಾದ ತಾಣ ಯಾವುದು? ದಶರಥ ಕುವರಿ ಶಾಂತಾದೇವಿಯನ್ನು ಋಷ್ಯಶೃಂಗರು ವರಿಸಿದ ಸ್ಥಳ ಯಾವುದು? ಭೂಮಿಸುತೆ ಸೀತೆ ಹೇಮದುಪ್ಪರಿಗೆಯಲ್ಲಿ ಅತ್ತೆಯವರೊಂದಿಗೂ ಅರಮನೆಯ ಪರಿಜನರೊಂದಿಗೂ ಸಡಗರದಿಂದ ಇರುತ್ತಿದ್ದ ಅಂತಃಪುರ ಎಲ್ಲಿತ್ತೂ, ಭಕ್ತಾಗ್ರಣಿ ಯಾದ ಮಾರುತಿಯು ದಾಶರಥಿಯ ಚರಣವನ್ನು ಎಲ್ಲಿ ಪೂಜಿಸುತ್ತಿದ್ದನೊ- ಈ ಎಲ್ಲವನ್ನೂ ನೋಡುವಾಸೆ.

ಸರಯೂ ಪಾವನೆ…: ಅಯೋಧ್ಯೆ ಸರಯೂ ತೀರದಲ್ಲಿದೆ. ಸರಯೂ ಬಹಳ ಧನ್ಯೆ. ಶ್ರೀರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡ ಪಾವನೆ. ಗಂಗಾ, ಯಮುನಾ, ಸರಸ್ವತಿಯರೊಂದಿಗೆ ಸ್ಮರಿಸಲ್ಪಡುವ ಸರಯೂ ಕೈಲಾಸದ ಬಳಿ ಮಾನಸದಲ್ಲಿ ಜನಿಸಿ ದಕ್ಷಿಣಕ್ಕೆ ಧಾವಿಸಿ ಅಯೋಧ್ಯೆಯನ್ನು ಆಲಂಗಿಸಿ ಹರಿದಿದ್ದಾಳೆ. ವಿಷ್ಣುವಿನ ಶೀರ್ಷಸ್ಥಾನವೆಂದು ಭಾವಿಸಲಾಗಿರುವ ಈ ನಗರ ಸೂರ್ಯವಂಶೀಯರ ರಾಜಧಾನಿಯಾಗಿ ಮೆರೆಯಿತು. ಮನುವಿನ ಬಳಿಕ ಇಕ್ಷಾಕು ಅಯೋಧ್ಯೆಯ ಅರಸನಾದ.

ಮನುವಿನಿಂದ 20 ತಲೆಮಾರುಗಳ ಬಳಿಕ ಯವನಾಶ್ವನ ಮಗನಾದ ಮಾಂಧಾತ ಅಯೋಧ್ಯೆಯ ಪ್ರತಿಷ್ಠೆಯನ್ನು ಹೆಚ್ಚು ಮಾಡಿದ. ಮಾಂಧಾತನ ಬಳಿಕ ಬಂದವರಲ್ಲಿ ಹರಿಶ್ಚಂದ್ರನೇ ಅತ್ಯಂತ ಪ್ರಸಿದ್ಧ. ವಿಶ್ವಾಮಿತ್ರನ ಪರೀಕ್ಷೆಗೆ ಗುರಿಯಾದ ಹರಿಶ್ಚಂದ್ರ ಸತ್ಯಕ್ಕಾಗಿ ಸಕಲವನ್ನೂ ತೊರೆದು ಸ್ಮಶಾನವಾಸಿಯಾದ. ಸುಂಕ ಕೊಡದ ಕಾರಣಕ್ಕಾಗಿ ತನ್ನ ಮಗನ ಸಂಸ್ಕಾರಕ್ಕೂ ಅವಕಾಶ ಕೊಡದ ಅವನು ವಿಶ್ವಾಮಿತ್ರರ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಅಯೋಧ್ಯೆಯ ಸಿಂಹಾಸನವನ್ನು ಪುನಃ ಅಲಂಕರಿಸಿದ. ಸಮುದ್ರವನ್ನು ಸಾಗರವನ್ನಾಗಿಸಿದ ಸಗರ ಮತ್ತು ಅವನ ಮಕ್ಕಳು ಅಯೋಧ್ಯೆಯವರೇ. ಅಂಶುಮಂತ, ಭಗೀರಥ, ಅಜ ಮುಂತಾದ ರಾಜರ್ಷಿಗಳನ್ನು ಕಂಡ ನಗರ ಇದು. ಈ ಮಾಲಿಕೆಯಲ್ಲಿ 65ನೇಯವನೇ ಪ್ರಭು ಶ್ರೀ ರಾಮಚಂದ್ರ.

ಸರ್ವರಿಗೂ ಶ್ರದ್ಧಾಕೇಂದ್ರ: ಅಯೋಧ್ಯೆ ಜೈನ ಪಂಥದವರಿಗೂ ಪರಮ ಶ್ರದ್ಧಾಕೇಂದ್ರ. ಜೈನ ಪಂಥದ 24 ತೀರ್ಥಂಕರರಲ್ಲಿ 22 ಮಂದಿ ಸೂರ್ಯವಂಶದವರು. ಆದಿನಾಥನಿಗೆ ಜ್ಞಾನೋದಯ ವಾದದ್ದು ಅಯೋಧ್ಯೆಯ ಬಳಿಯೇ. ಈ ಎಲ್ಲ ಕಾರಣಗಳಿಂದ ಅಯೋಧ್ಯೆ ಜೈನರ ಹೃದಯದಲ್ಲಿ ಅಪೂರ್ವ ಸ್ಥಾನ ಗಳಿಸಿದೆ. ಬೌದ್ಧ ಧರ್ಮವು ಉಚ್ಛಾಯ ಸ್ಥಿತಿಯಲ್ಲಿದ್ದಾಗ ಅಯೋಧ್ಯೆ ಸಾಕೇತ ಎಂದು ಪ್ರಸಿದ್ಧವಾಗಿತ್ತು. ಗಯಾದಲ್ಲಿ ಸಿದ್ಧಾರ್ಥ ಬುದ್ಧನಾದ. ಸಾರನಾಥದಲ್ಲಿ ಮೊದಲ ಪ್ರವಚನ ನೀಡಿದ. ಹೀಗೆ ಮಗಧ ಮತ್ತು ಕಾಶಿಯ ಪುಣ್ಯಭೂಮಿಯಲ್ಲಿ ಬೌದ್ಧ ಪಂಥ ಜನಿಸಿತು.

ಆದರೆ, ಅದಕ್ಕೆ ಮೊದಲ ಪೋಷಣೆ ಸಿಕ್ಕಿದ್ದು ಕೋಸಲದಲ್ಲಿ. ಬೌದ್ಧ ಭಿಕ್ಷುಗಳ ಬದುಕಿಗೆ ಸಂಬಂಧಿ ಸಿದ ವಿ ನಿಷೇಧಗಳ ರಚನೆಯಾದದ್ದೂ ಅಯೋಧ್ಯೆಯಲ್ಲೇ. ಪ್ರಸಿದ್ಧ ಕವಿ, ನಾಟಕಕಾರ, ದಾರ್ಶನಿಕ ಅಶ್ವಘೋಷ ಅಯೋಧ್ಯೆಯವನು. ಬೌದ್ಧ ಧರ್ಮದ ಜ್ಞಾನಕೋಶ ಎಂದು ಪರಿಗಣಿಸಲಾಗಿರುವ “ಅಭಿಧರ್ಮ ಕೋಶ’ ಎನ್ನುವ ಗ್ರಂಥ ರಚನೆಯಾದದ್ದು ಅಯೋಧ್ಯೆಯಲ್ಲಿ. ಸಿಕ್ಖ್ ಪಂಥದ ಸ್ಥಾಪಕ ನಾನಕ್‌ ದೇವ್‌ ಹಾಗೂ ಗುರು ಅಮರ ದಾಸ್‌, ತೇಗ ಬಹದ್ದೂರ್‌, ಗುರುಗೋವಿಂದ ಸಿಂಹರು ಅಯೋಧ್ಯೆಯನ್ನು ಸಂದರ್ಶಿಸಿದ್ದಾರೆ. ಗುರುನಾನಕರಿಗೆ ದೈವ ಸಾಕ್ಷಾತ್ಕಾರ ಆಗಿದ್ದೂ ಇಲ್ಲಿಯೇ.

ಮೇಲಿಂದ ಮೇಲೆ ಆಕ್ರಮಣ: ರಾಜಾ ವಿಕ್ರಮಾದಿತ್ಯನ ಸಮಯದಲ್ಲಿ ಗುಪ್ತರ ಕಾಲದಲ್ಲಿ ಗೌರವದ ಸ್ಥಿತಿಗೆ ತಲುಪಿದ್ದರೂ ನಂತರ ಮುಸಲ್ಮಾನರ ಆಕ್ರಮಣಗಳಿಂದ ಜರ್ಝರಿತವಾಯಿತು. 1193ರಲ್ಲಿ ಶಹಾಬುದ್ದೀನ್‌ ಘೋರಿ ಅಯೋಧ್ಯೆಯನ್ನು ಆಕ್ರಮಿಸಿದ. 1526ರಲ್ಲಿ ಭಾರತಕ್ಕೆ ಬಂದೆರಗಿದ ಬಾಬರ್‌ 1528ರಲ್ಲಿ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಿದ. ಅಲ್ಲಿಂದ ಅಯೋಧ್ಯೆಯ ಬಾಳಿನಲ್ಲಿ ದೌರ್ಭಾಗ್ಯದ ದಿನಗಳು ಪ್ರಾರಂಭವಾದವು. ಆ ವೇಳೆಗೆ ಅಯೋಧ್ಯೆಯಲ್ಲಿ ನೆಲೆಸಿದ್ದ ಫಕೀರನ ಆಸೆ ಪೂರೈಸಲಿಕ್ಕಾಗಿ, ತನ್ನ ಸೇನಾಧಿಕಾರಿ ಆಗಿದ್ದ ಮೀರ್‌ ಬಾಕಿಖಾನ್‌ನ ಮೂಲಕ ಶ್ರೀರಾಮ ಜನ್ಮಸ್ಥಾನದ ಭವ್ಯ ದೇಗುಲವನ್ನು ಧ್ವಂಸಗೊಳಿಸಿದ ನಂತರ ಅದೇ ಸ್ಥಳದಲ್ಲಿ ದೇಗುಲದ ಸಾಮಗ್ರಿಗಳನ್ನೇ ಬಳಸಿ ಮಸೀದಿಗೆ ಅಡಿಪಾಯ ಹಾಕಲಾಯಿತು. ಆದರೆ, ಅದು ಪೂರ್ಣಗೊಳ್ಳಲಿಲ್ಲ. ಅದರ ಮುಕ್ತಿಗಾಗಿ ನಿರಂತರ ಸಂಘರ್ಷ ನಡೆಯಿತು. ಸ್ವಾತಂತ್ರ ನಂತರವೂ ಅದರ ದಾಸ್ಯ ಕೊನೆಗೊಳ್ಳಲಿಲ್ಲ.

ರಾಮಜಪ ಶುರು…: 1940ರಿಂದ ಅಲ್ಲಿ ನಿರಂತರ “ರಾಮಚರಿತಮಾನಸ’ದ ಪಠಣ ಪ್ರಾರಂಭವಾಯಿತು. 1949ನೇ ಡಿಸೆಂಬರ್‌ನಲ್ಲಿ ಶ್ರೀರಾಮನ ವಿಗ್ರಹ ಅಲ್ಲಿ ಮರು ಪ್ರತಿಷ್ಠಾಪಿಸಲಾಯಿತು. ಆ ಕ್ಷಣದಿಂದ ನಿರಂತರ ಅಖಂಡ ಭಜನೆ ಪ್ರಾರಂಭವಾಗಿದೆ. ವಿವಾದ ಮುಗಿಯುತ್ತಾ ಇಲ್ಲ. ಗರ್ಭಗುಡಿಗೆ ಬೀಗ, ಆ ಬೀಗವನ್ನು 1986ರಲ್ಲಿ ತೆರೆಯಲಾಯಿತು. ನಂತರ ಶಿಲಾಪೂಜನ, ಪಾದುಕಾಯಾತ್ರೆ, ಸಂತ ಯಾತ್ರೆಗಳು ಹಾಗೂ ಕರಸೇವೆಗಳೂ ನಡೆದವು. 1992ರ ಡಿ. 6ರಂದು ವಿವಾದಿತ ಕಟ್ಟಡ ಅನಿರೀಕ್ಷಿತವಾಗಿ ಕರಸೇವಕರ ಆಕ್ರೋಶಕ್ಕೆ ತುತ್ತಾಯಿತು. ಆದರೆ, ಭವ್ಯ ಮಂದಿರ ನಿರ್ಮಾಣದ ಆಶಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.

ಇದು “ಭಾರತ ದರ್ಶನ’ ಉಪನ್ಯಾಸದ ಆಯ್ದ ಭಾಗ
ಕೃಪೆ: ಗೀತಭಾರತಿ, ಬೆಂಗಳೂರು

* ಬಿ.ವಿ. ವಿದ್ಯಾನಂದ ಶೆಣೈ

LEAVE A REPLY

Please enter your comment!
Please enter your name here