Home ನಂಬಿಕೆ ಸುತ್ತಮುತ್ತ ಅಯೋಧ್ಯೆ ಸಹಸ್ರ ಪುಣ್ಯಗಳ ಧಾಮ

ಅಯೋಧ್ಯೆ ಸಹಸ್ರ ಪುಣ್ಯಗಳ ಧಾಮ

558
0
SHARE

ಅಯೋಧ್ಯೆ! ಭಾರತದ ಪ್ರಾಚೀನ ನಗರ; ಹಿಂದೂಗಳ ಶ್ರದ್ಧಾಕೇಂದ್ರ. ಈ ಶ್ರದ್ಧೆಗೆ ಕಾರಣ ಅಯೋಧ್ಯೆ ಎಂಬ ನಗರವಲ್ಲ. ಅಲ್ಲಿ ಜನಿಸಿದ ಶ್ರೀರಾಮ. ಏಕೆಂದರೆ, ಈ ರಾಮ ಕೇವಲ ಎರಡಕ್ಷರವಲ್ಲ; ಮಹಿಮೆ. ರಾಮನೆಂದರೆ, ಆದರ್ಶ. ರಾಮನೆಂದರೆ, ಶೌರ್ಯದ ಪ್ರತೀಕ. ರಾವಣನಂಥ ರಾವಣನೇ ಎತ್ತಲಾಗದ ಶಿವಧನುಸ್ಸನ್ನು ಮುರಿದು ಬಿಸುಟ ಮಹಾಶೂರ. ಶಿಷ್ಟಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಮಹಾರಾಜ. ದುಷ್ಟರ ಪಾಲಿಗೆ ಯಮ. ಬೆಳಕು (ಸಜ್ಜನಿಕೆ) ಮತ್ತು ಕತ್ತಲೆ (ದುಷ್ಟಶಕ್ತಿ) ಒಂದೇ ಕಡೆ ಒಂದೇ ಕಾಲಕ್ಕೆ ಇರಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟ ಮಹಾನುಭಾವ.

ಕರೆದರೆ ಸಾವಿರ ರಾಜಕುಮಾರಿಯರು ಬರುವಂಥ ಚಕ್ರವರ್ತಿ ಪೀಠದಲ್ಲಿದ್ದರೂ ಏಕಪತ್ನಿವ್ರತಸ್ಥ. ವಿಷ್ಣುವಿನ ಏಳನೆಯ ಅವತಾರ. ರಾಮನ ಆಡಳಿತದಲ್ಲಿ ಅಯೋಧ್ಯೆಯ ಮನೆಗಳಿಗೆ ಬಾಗಿಲುಗಳೇ ಇರಲಿಲ್ಲವಂತೆ. ಇದ್ದರೂ ತೆರೆದೇ ಇರುತ್ತಿದ್ದವಂತೆ. ಏಕೆಂದರೆ, ಅವನ ರಾಜ್ಯದಲ್ಲಿ ಕಳ್ಳರಿರಲಿಲ್ಲ. ವಂಚನೆಯ ಚಿಂತೆ ಇರಲಿಲ್ಲ. ಅದು ರಾಮ ಇಟ್ಟುಹೋದ ಸುಖೀರಾಜ್ಯದ ಮಾದರಿ. ಸಜ್ಜನ ದುರ್ಜನ ಸಂಗ್ರಾಮ ರಾಮನಿಗೆ ಯಾವುದೇ ವ್ಯಕ್ತಿಯೊಡನೆ ವೈರತ್ವವಿರಲಿಲ್ಲ. ಅಧರ್ಮ, ಅತ್ಯಾಚಾರ, ಪಾಪ ಇವುಗಳ ವಿರುದ್ಧ ಅವನು ಶಸ್ತ್ರ ಎತ್ತುತ್ತಿದ್ದ. ರಾಕ್ಷಸರ ಮೇಲೆ ದಾಳಿ ಮಾಡುವಾಗಲೂ ಅವನಿಗೆ ಬೇರೆ ಉದ್ದೇಶವಿರ ಲಿಲ್ಲ.

ಗೆದ್ದ ರಾಜ್ಯಗಳನ್ನು ಅವನು ಸ್ವಾ ಧೀನಪಡಿ ಸಿಕೊಂಡವನಲ್ಲ. ತಾನು ವಾಲಿಯಿಂದ ಗೆದ್ದ ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟ. ಹಾಗಿದ್ದೂ ಅಂಗದನಿಗೆ ಯುವರಾಜಪಟ್ಟ ಕಟ್ಟಿ ವಾಲಿಯ ವಂಶಕ್ಕೇ ರಾಜ್ಯವನ್ನು ಉಳಿಸಿದ. ಲಂಕೆಯನ್ನು ವಿಭೀಷಣನಿಗೆ ಬಿಟ್ಟುಕೊಟ್ಟ. ಹಾಗೆ ನೋಡಿದರೆ, ರಾಮಾಯಣದಲ್ಲಿ ನಡೆದಿದ್ದೆಲ್ಲ ಸಜ್ಜನ ದುರ್ಜನ ಸಂಗ್ರಾಮಗಳೇ. ರಾಮ ಮರ್ಯಾದಾ ಪುರುಷೋತ್ತಮ. ಸಜ್ಜನ ನಾಯಕತ್ವ ಹೇಗಿರಬೇಕೆಂಬುದಕ್ಕೆ ಉದಾಹರಣೆ. ಅವನಲ್ಲಿ ಶ್ರೀಕೃಷ್ಣನ ರಾಜಕಾರಣವಿರಲಿಲ್ಲ. ಶ್ರೀಕೃಷ್ಣ ಮಹಾಭಾರತದ ಪ್ರಮುಖ ಶಕ್ತಿ ಅಷ್ಟೇ. ಯಾರೂ ಕೃಷ್ಣ ರಾಜ್ಯದ ಮಾತನಾಡುವುದಿಲ್ಲ. ಆದರೆ, ರಾಮನೊಬ್ಬನೇ ರಾಮಾಯಣ. ಅಲ್ಲಿ ರಾಮನೇ ಎಲ್ಲ. ಸೀತಾ ಪರಿತ್ಯಾಗದಂಥ ಒಂದೆರಡು ಸಂದರ್ಭ ಬಿಟ್ಟರೆ ರಾಮನ ನಿರ್ಣಯಗಳು ಎಲ್ಲೂ ಪ್ರಶ್ನಾರ್ಥಕವೆನಿಸುವುದೇ ಇಲ್ಲ. ಹೀಗಾಗಿ, ಇಡೀ ರಾಮನ ಬದುಕನ್ನು ಅವಲೋಕಿಸಿದರೆ ಅವನೇ ಒಂದು ರಾಷ್ಟ್ರವಾಗಿ ನಿಲ್ಲುತ್ತಾನೆ.

ಅವನು ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಮಿತ್ರ, ಆದರ್ಶ ಪತಿ, ಆದರ್ಶ ರಾಜ. ಇಷ್ಟೇ ಅಲ್ಲ ಆದರ್ಶ ಶತ್ರು ಕೂಡ. ಅವನ ಬದುಕೆಂದರೆ ಭಾವನೆ ಹಾಗೂ ಕರ್ತವ್ಯಗಳ ಅಪೂರ್ವ ಸಂಘರ್ಷ. ಭಾವನೆಯ ಮೇಲೆ ಕರ್ತವ್ಯದ ವಿಜಯ. ರಾಮ ರಾಜ್ಯ ಜನರ ಅಂತಃಕರಣದಿಂದ ಸ್ವಾರ್ಥ ಮತ್ತು ವ್ಯಕ್ತಿವಾದವನ್ನು ನಿರ್ಮೂಲ ಮಾಡಿತು. ಅದೇ ಕಾರಣಕ್ಕೆ ಆ ರಾಜ್ಯಸಂಸ್ಥೆ ಇಂದಿಗೂ ಆದರ್ಶವಾಗಿದೆ. ಆ ಜೀವನ ದೃಷ್ಟಿ ಉದಯಿಸಲು “ಕೃಣ್ವಂತೋ ವಿಶ್ವಮಾರ್ಯಂ’ ಎನ್ನುವ ಮನಸ್ಸುಗಳು ಬೇಕು. ಕೋದಂಡದ ಸುಧಾರಣೆ ಮತ್ತು ವಿಶ್ವ ಬಂಧುತ್ವದ ಸುಸಂಸ್ಕೃತಿ- ಇವೆರಡರ ಸಮನ್ವಯ ರಾಮ. ಇಂಥ ಮಹಾಮಹಿಮ ಹುಟ್ಟಿದ ಸ್ಥಳ ಅಯೋಧ್ಯೆ. ಸೂರ್ಯವಂಶದ ಮಹಾಪುರುಷರು ಆಳಿದ ಸಾಮ್ರಾಜ್ಯದ ರಾಜಧಾನಿ
ಅಯೋಧ್ಯೆ.

ಅಯೋಧ್ಯೆ ರಾಮಾಯಣ: ರಾಜಧಾನಿ ದಿಲ್ಲಿಯಿಂದ 555 ಕಿಲೋಮೀಟರ್‌, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 133 ಕಿ.ಮೀ. ದೂರದಲ್ಲಿರುವ ಅಯೋಧ್ಯೆ ಹಿಂದೂಗಳ ಪವಿತ್ರ ಸ್ಥಳ. ಇದು ಕಾಶಿಯಿಂದ 200 ಕಿ.ಮೀ. ದೂರದಲ್ಲಿದೆ. ಒಂದೊಂದು ಪುರಾಣಗಳಲ್ಲಿ ಅಯೋಧ್ಯೆಯ ಕುರಿತು ವಿಭಿನ್ನ ರೀತಿಯ ವರ್ಣನೆ ಕಾಣಬಹುದಾಗಿದೆ.

ಎಲ್ಲಿದೆ? ಅಲ್ಲೇನಿದೆ?: ಅಯೋಧ್ಯೆಯು ಜಗತ್ತಿನ ಆದಿ ಕಾವ್ಯವಾದ ರಾಮಾಯಣದಲ್ಲಿ ವಾಲ್ಮೀಕಿ ಋಷಿಗಳು ವರ್ಣಿಸಿದ ಪವಿತ್ರ ನಗರ. ಈಗ ಅದು ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ರಾಮಾಯಣದಲ್ಲಿ ಅದು ರಾಮನ ಜನ್ಮಸ್ಥಳ ಎಂದು ಹೇಳಿರುವುದರಿಂದ ಬಹಳ ಕಾಲದಿಂದಲೂ ಅದು ಪವಿತ್ರ ಯಾತ್ರಾ ಸ್ಥಳವಾಗಿದೆ. ಕಾಲನೇ ಸ್ವತಃ ಬಂದು ಸೂಚನೆ ನೀಡಿದ ನಂತರ ರಾಮ ಈ ಭೂಮಿಯಿಂದ ನಿರ್ಗಮಿಸಿದ್ದು ಸರಯೂ ನದಿಯ ಮೂಲಕ. ನೀರಿನಲ್ಲಿ ಇಳಿಯುತ್ತ ಸರಯೂ ನದಿಯೊಂದಿಗೆ ಲೀನವಾಗಿ ರಾಮ ನಿರ್ಯಾಣ ಹೊಂದುತ್ತಾನೆ ಎಂಬ ಕಥೆಯಿದೆ. ಅದೇ ಸರಯೂ ನದಿಯ ತೀರದಲ್ಲಿದೆ ಈ ಅಯೋಧ್ಯೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here