ಉಡುಪಿ : ಆಸ್ಟ್ರೇಲಿಯಾದ ಪ್ರಮುಖ ನಗರ ಮೆಲ್ಬರ್ನ್ ನಲ್ಲಿ ಆಚಾರ್ಯ ಮಧ್ವರ ವಿಗ್ರಹವನ್ನು ಮಧ್ವನವಮಿ ದಿನವಾದ ಫೆ. 3ರಂದು ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪ್ರತಿಷ್ಠಾಪಿಸಲಿದ್ದಾರೆ.
ಪುತ್ತಿಗೆ ಮಠಾಧೀಶರ ಶ್ರೀಕೃಷ್ಣ ಭಕ್ತಿ ಪ್ರಚಾರದಂಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಜಗತ್ತಿನ ವಿವಿಧೆಡೆಗಳಲ್ಲಿ ಶ್ರೀಕೃಷ್ಣ ಭಕ್ತಿಯ ಸಂದೇಶ ಸಿಗಬೇಕೆಂಬುದು ಅವರ ಇರಾದೆ. ಜಗತ್ತಿನ ರಾಜಕೀಯಕ್ಕೆ ವಿಶ್ವಶಾಂತಿ ಮತ್ತು ಆಧ್ಯಾತ್ಮಿಕ ಆಯಾಮ ಸಿಗಬೇಕೆಂಬುದು ಶ್ರೀಗಳ ಉದ್ದೇಶ. ಮಧ್ವಾಚಾರ್ಯರ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಭಂಗಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಗುರಿ ಇರಿಸಿಕೊಂಡಿದ್ದು, ಈಗಾಗಲೇ ಅಮೆರಿಕದ ಹ್ಯೂಸ್ಟನ್ ಮತ್ತು ಒಮಾನ್ನ ಮಸ್ಕತ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ.
ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಮೆಲ್ಬರ್ನ್ನ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಮಧ್ವನವಮಿಯಂದು ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪನೆ ಮತ್ತು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ ಸುದರ್ಶನ ಹೋಮ, ಮುದ್ರಾಧಾರಣ, ವಿಗ್ರಹ ಪ್ರತಿಷ್ಠಾಪನೆ, ವಾಯುಸ್ತುತಿ ಪುರಶ್ಚರಣದೊಂದಿಗೆ ಮಧು ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ, ಸಂಜೆ ಭಜನೆ, ಧಾರ್ಮಿಕ ಸಭೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.