
ಕಾರ್ಕಳ: ಕಳೆದ ಐದು ದಿನಗಳಿಂದ ಕಾರ್ಕಳದಲ್ಲಿ ಮನೆಮಾಡಿದ್ದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಸಂಭ್ರಮವು ಗುರುವಾರ ಸಂಭ್ರಮದಿಂದ ತೆರೆಕಂಡಿದೆ. ಜ. 21ರಂದು ಬೆಳಗ್ಗೆ 7.30ಕ್ಕೆ ಮಾನಸ್ತಂಭ ಉದ್ಘಾಟನೆಗೊಂಡು ‘ಭಾತೃತ್ವದ ರವಿವಾರ’ ಆಚರಿಸಿ ಮೆರವಣಿಗೆ ನಡೆಸುವ ಮೂಲಕ ಚಾಲನೆಗೊಂಡ ವಾರ್ಷಿಕ ಮಹೋತ್ಸವ ಜ. 25ರಂದು ರಾತ್ರಿ 9.30ಕ್ಕೆ ನಡೆದ ದಿವ್ಯ ಬಲಿಪೂಜೆಯೊಂದಿಗೆ ಈ ಬಾರಿಯ ವಾರ್ಷಿಕೋತ್ಸವ ಕೊನೆಗೊಂಡಿದೆ.
ಪ್ರತೀ ವರ್ಷವೂ ಸಾಮಾಜಿಕ ಕಳಕಳಿಯ ಪ್ರಮುಖ ವಿಷಯವನ್ನಿಟ್ಟಕೊಂಡು ಇಲ್ಲಿ ವಾರ್ಷಿಕ ಮಹೋತ್ಸವ ನಡೆಯುತ್ತದೆ. ಈ ಬಾರಿಯೂ ಬಡವರನ್ನು ಆಧರಿಸುವವರು ಭಾಗ್ಯವಂತರು ಎನ್ನುವ ವಿಷಯದಲ್ಲಿ ಮಹೋತ್ಸವ ಜರಗಿದ್ದು, ಮಹೋತ್ಸವದಲ್ಲಿ ಒಟ್ಟು 43 ಬಲಿಪೂಜೆಗಳನ್ನು ನಡೆಸಲಾಗಿದೆ. ಪ್ರತಿದಿನ ವಿಶೇಷ ದಿವ್ಯಬಲಿಪೂಜೆಯನ್ನು ಕರಾವಳಿ ಸೇರಿದಂತೆ ರಾಜ್ಯದ ಇತರ ಧರ್ಮಪ್ರಾಂತ್ಯದ ಧರ್ಮಗುರುಗಳು ನೆರವೇರಿಸಿದ್ದಾರೆ.
ಅಚ್ಚುಕಟ್ಟಾಗಿ ನಡೆದ ವಾರ್ಷಿಕೋತ್ಸವ
ಲಕ್ಷಾಂತರ ಮಂದಿ ಭಾಗವಹಿಸುವ ವಾರ್ಷಿಕ ಮಹೋತ್ಸವ ಇದಾದರೂ ಯಾವುದೇ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ನಡೆದಿದೆ. ದೂರದ ಊರುಗಳಿಂದ ಆಗಮಿಸಿದ ಭಕ್ತರಿಗೆ ತೊಂದರೆಯಾಗದಂತೆ ಮೂಲ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆ. ನೂರರು ಮಂದಿ ಸ್ವಯಂಸೇವಕರು ತಮ್ಮ ಸೇವೆ ಸಲ್ಲಿಸಿದ್ದಾರೆ.
ಕೊನೆಯ ದಿನವೂ ಜನಸಾಗರ
ವಾರ್ಷಿಕೋತ್ಸವದ ಕೊನೆಯ ದಿನವಾದ ಗುರುವಾರವೂ ಬೆಳಗ್ಗೆಯಿಂದಲೇ ಜನ ಸಾಗರವೇ ನೆರೆದಿತ್ತು. ಕೊನೆಯ ದಿನ ಕರಾವಳಿ ಭಾಗದ ಜನತೆ ಹಾಗೂ ಕಾರ್ಕಳದ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಮುಸ್ಲಿಂ ಧರ್ಮದವರೂ ಕೂಡ
ಹೆಚ್ಚಾಗಿ ಭಾಗವಹಿಸಿದ್ದಾರೆ. 5 ದಿನಗಳಲ್ಲಿ ಗಣ್ಯರು ಸೇರಿದಂತೆ ಲಕ್ಷಾಂತರ ಮಂದಿ ಮಹೋತ್ಸವಕ್ಕೆ ಸಾಕ್ಷಿಯಾದರು.