ಕಾರ್ಕಳ: ಕ್ರೈಸ್ತ ಧರ್ಮದ ಆರಾಧನಾ ಕೇಂದ್ರ ಚರ್ಚ್ಗಳಿಗೆ ಸಲ್ಲುವ ಅತ್ಯುನ್ನತ ಗೌರವ ಪಡೆದ ಬಸಿಲಿಕಾಗಳು ಮಾತ್ರ ಹಾಕುವಂತಹ ಮಾನ ಸ್ತಂಭವನ್ನು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಸ್ಥಾಪನೆ ಮಾಡಲಾಗಿದ್ದು, ಜ. 21ರಂದು ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡುವುದಕ್ಕೂ ಮೊದಲು ಮಾನಸ್ತಂಭದ ಉದ್ಘಾಟನೆ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್ ಡಿ’ಸೋಜಾ ಮಾತನಾಡಿ, ಅತ್ತೂರು ಚರ್ಚ್ ಬಸಿಲಿಕಾ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ಈ ಮಾನಸ್ತಂಭವನ್ನು ಸ್ಥಾಪಿಸಲಾಗಿದೆ. ಸುಮಾರು 43 ಅಡಿ ಎತ್ತರದ ಮಾನಸ್ತಂಭದ ತಳದಲ್ಲಿ ಅಷ್ಟಪಟ್ಟಿಯಲ್ಲಿ ಎಂಟು ವಿಭಾಗಗಳನ್ನು ಮಾಡಲಾಗಿದೆ. ಅದರಲ್ಲಿ ಬಸಿಲಿಕಾದ ಘೋಷಣೆಯಾದ ದಿನಾಂಕ, ಚರ್ಚ್ನ ಚಿತ್ರ, ಸಂತ ಲಾರೆನ್ಸರ ಚಿತ್ರ, ಪವಾಡ ಮೂರ್ತಿ, ದಾನಿಗಳ ಹೆಸರು ಮತ್ತು ಬಸಿಲಿಕಾದ ಲಾಂಛನ ಮೊದಲಾದ ಐತಿಹಾಸಿಕ ವಿಷಯಗಳನ್ನು ತಿಳಿಸುವ ರೀತಿಯಲ್ಲಿ ಕಲ್ಲಿನಿಂದ ಕೆತ್ತಲಾಗಿದೆ.
ಇಲ್ಲಿನ ಚರ್ಚ್ಗೆ ಕ್ರೈಸ್ತ ಧರ್ಮದವರು ಮಾತ್ರವಲ್ಲದೇ ಎಲ್ಲ ಧರ್ಮದವರೂ ಕೂಡ ಇಲ್ಲಿಗೆ ಆಗಮಿಸುತ್ತಾರೆ. ಅವರೆಲ್ಲರಿಗೂ ಮಾನಸ್ತಂಭದ ಮೂಲಕ ಬಸಿಲಿಕಾದ ಮಹತ್ವ ತಿಳಿಯಲಿದೆ ಎಂದರು. ಮಾನಸ್ತಂಭದ ಸ್ಥಾಪನೆಗಾಗಿ ಸಹಕರಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ದಾನಿ ರಿಚರ್ಡ್ ಕ್ರಿಸ್ತಿನ್ ಲೋಬೋ ಲಂಡನ್, ಫಾ| ವೀರೇಶ್ ಮೋರಸ್, ಫಾ|ಜೆನ್ಸಿಲ್ ಆಳ್ವ, ಪಾಲಾನ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವ, ವಲೇರಿಯನ್ ಪಾಯಿಸ್, ರಿಚರ್ಡ್ ಪಿಂಟೋ, ಸಂತೋಷ್ ಡಿ’ಸಿಲ್ವ ಮತ್ತಿತರರು ಉಪಸ್ಥಿತರಿದ್ದರು. ಪಾಲನಾ ಮಂಡಳಿಯ ಕಾರ್ಯ ದರ್ಶಿ ಲೀನಾ ಡಿ’ಸಿಲ್ವ ಅವರು ಕಾರ್ಯಕ್ರಮ ನಿರೂಪಿಸಿದರು.