ತೆಕ್ಕಟ್ಟೆ: ಆಷಾಢ ಮಾಸದ ಆಟಿ ಅಮಾವಾಸ್ಯೆಯ ದಿನವಾದ ಶನಿವಾರ ಪ್ರತಿ ವರ್ಷದಂತೆ ಕೊಮೆ, ಕೊರವಡಿ, ಗೋಪಾಡಿ ಕಡಲಿನಲ್ಲಿ ಮುಂಜಾನೆಯಿಂದಲೇ ಜನರು ಸಾಗರೋಪಾದಿಯಲ್ಲಿ ಸಮುದ್ರ ಸ್ನಾನಕ್ಕಾಗಿ ಬಹು ಉತ್ಸಾಹದಿಂದ ಪಾಲ್ಗೊಂಡಿರುವ ದೃಶ್ಯ ಕಂಡು ಬಂತು.
ಸ್ಥಳೀಯರು ಬರಿಗೈಯಲ್ಲಿ ಬಂದು ಸಮುದ್ರ ಸ್ನಾನಕ್ಕೆ ಇಳಿಯಬಾರದು ಎಂಬ ನಂಬಿಕೆ ಹಿನ್ನೆಲೆ ಸ್ನಾನಕ್ಕೆ ತೆರಳುವ ಮುನ್ನ ಜನರು ಕೈನಲ್ಲಿ ಒಂದು ಹಿಡಿ ಮರಳು ಹಿಡಿದುಕೊಂಡು ಸಮುದ್ರದ ನೀರಿಗೆ ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಸಮುದ್ರ ಸ್ನಾನಗೈದು ಹಿಂದಿರುಗುವ ಮಂದಿಗೆ ಹಿರಿಯರಾದ ಕೊಮೆ ವಿಷ್ಣುಮೂರ್ತಿ ಉಪಾಧ್ಯಾಯ ಅವರು ತೀರ್ಥಪ್ರಸಾದವನ್ನು ನೀಡಿ ಆಟಿ ಅಮಾವಾಸ್ಯೆ ವಿಶೇಷತೆಯ ಬಗ್ಗೆ ಧಾರ್ಮಿಕವಾಗಿ ಅರಿವು ಮೂಡಿಸಿದರು.
ಹೆಚ್ಚಿದ ಕಡಲ ಅಬ್ಬರ
ಆಟಿ ಅಮಾವಾಸ್ಯೆಯಂದು ಕಡಲು ಅಷ್ಟೊಂದು ಶಾಂತವಾಗಿರದೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಭಕ್ತರು ಬಹಳ ಜಾಗೃತಿಯಿಂದಲೇ ಸಮುದ್ರ ಸ್ನಾನ ನೆರವೇರಿಸಿದರು. ಮುಂಜಾನೆಯಿಂದ ಮಳೆಯಿದ್ದರೂ ಸಮುದ್ರ ಸ್ನಾನಕ್ಕೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆಗೇನೂ ಕೊರತೆ ಇರಲಿಲ್ಲ.