Home ನಂಬಿಕೆ ಸುತ್ತಮುತ್ತ ಜಾತಕಫಲಗಳು ಸತ್ಯವೇ?

ಜಾತಕಫಲಗಳು ಸತ್ಯವೇ?

4301
0
SHARE

ಜೀವನದಲ್ಲಿ ಸೋಲುಂಟಾದಾಗ ಅಥವಾ ಮನಸ್ಸಿಗೆ  ನೆಮ್ಮದಿ ದೊರೆಯದಿದ್ದಾಗ ಹೆಚ್ಚಿನವರು ತಮ್ಮ ಜಾತಕಫಲವನ್ನು ತಿಳಿಯುವುದಕ್ಕಾಗಿ ಜ್ಯೋತಿಷಿಯಲ್ಲಿ ಹೋಗುತ್ತಾರೆ. ಅವರು ನಮ್ಮ ಜಾತಕ ಕುಂಡಲಿಗಳನ್ನು ಪರಿಶೀಲಿಸಿ ಅವರು ಕಲಿತ ಜ್ಯೋತಿರ್ವಿಜ್ಞಾನ ಶಕ್ತಿಯಿಂದ ನಮ್ಮ ಜೀವನದಲ್ಲಿ ಈಗ ಇರುವ ಸಮಸ್ಯೆ ಮತ್ತು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ತಿಳಿಸುತ್ತಾರೆ. ಆದರೆ ‘ಈ ಗ್ರಹಫಲ ಅಥವಾ ನಕ್ಷತ್ರಫಲಗಳು ಎಷ್ಟರ ಮಟ್ಟಿಗೆ ಸರಿ?’ ಎಂಬ ವಾದ ಹಲವರದು. ‘ಅವನ್ನೆಲ್ಲ ನಂಬುವುದರಲ್ಲಿ ಅರ್ಥವೇ ಇಲ್ಲ’ ಎಂಬ ನಿರ್ಧಾರವನ್ನು ತಳೆದವರೂ ಇದ್ದಾರೆ. ಆಗ ಈ ಜಾತಕಫಲಗಳು ಸತ್ಯವೇ ಸುಳ್ಳೇ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತದೆ.

ಒಮ್ಮೆ ಅರಸನೊಬ್ಬನ ಮಗನ ಜಾತಕವನ್ನು ಪರಿಶೀಲಿಸಿದ ಜ್ಯೋತಿಷಿ “ಇನ್ನು ಎಂಟು ದಿನದಲ್ಲಿ ನಿನ್ನ ಮಗನಿಗೆ ಹಂದಿಯಿಂದ ಮರಣ” ಎಂದು ನುಡಿಯುತ್ತಾನೆ. ರಾಜನಿಗೆ ಕೋಪ ತಡೆಯಲಾಗದೆ ಜ್ಯೋತಿಷ್ಯವನ್ನು ಸುಳ್ಳು ಮಾಡುತ್ತೇನೆಂದು ನಿರ್ಧರಿಸಿ ಮಗನಿಗೆ ಹೊರಗೆಲ್ಲೂ ಬಿಡದೆ, ಅರಮನೆಯ ಸುತ್ತ ಯಾವುದೇ ಪ್ರಾಣಿಯೂ ಬಾರದಂತೆ ವ್ಯವಸ್ಥೆ ಮಾಡಿಸುತ್ತಾನೆ. ಏಳನೆಯ ದಿನ ಅರಸನ ಮಗ ಅರಮನೆಯ ಅಂಗಣದಲ್ಲಿ ಬಿದ್ದು ಸತ್ತನೆಂಬ ವಾರ್ತೆ ಅರಸನಿಗೆ ತಿಳಿಯುತ್ತದೆ. ಆಟ ಆಡುತ್ತಿದ್ದ ಮಗ ಸತ್ತು ಬಿದ್ದಿದ್ದ. ಅರಮನೆಯ ಮೇಲಿದ್ದ ಶಿಲೆಯಿಂದ ಕೆತ್ತಲಾಗಿದ್ದ ವರಾಹಮುದ್ರೆಯು ಮುರಿದು ಅವನ ಎದೆಯ ಮೇಲೆ ಬಿದ್ದಿತ್ತು. ಅಂದರೆ ಹಂದಿಯಿಂದ ಮರಣ ಎಂಬುದು ಸುಳ್ಳಾಗಲಿಲ್ಲ. ಇದು ತುಂಬಾ ಹಳೆಯ ಕಥೆ. ಇಲ್ಲಿ ಜ್ಯೋತಿಷ್ಯ ಸುಳ್ಳಾಗಲಿಲ್ಲ.

ನೀವೂ ಗಮನಿಸಿ. ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯಗಳೂ ನೂರಕ್ಕೆ ನೂರರಷ್ಟು ಸರಿಯಾಗುವ ದಿನಗಳೂ ಇವೆ. ಅಲ್ಲಿಗೆ ಜ್ಯೋತಿಷ್ಯ ಸುಳ್ಳಲ್ಲ ಎಂದಾಯಿತು. ಅದನ್ನು ಪರಿಶೀಲಿಸುವ ವಿಧಾನದಲ್ಲಿ ತಪ್ಪಿರಬಹುದು. ಯಾಕೆಂದರೆ ಜಾತಕಫಲಗಳನ್ನು ನುಡಿಯುವುದು ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಸರಿಯಾದ ಅಧ್ಯಯನ ಬೇಕೇಬೇಕು. ಜ್ಞಾಪಕಶಕ್ತಿಯೂ ಸಾಕಷ್ಟಿರಬೇಕು. ಒಂದು ಗ್ರಹಗತಿಯ ಅನುಕೂಲ ಅಥವಾ ಅನಾನುಕೂಲಗಳು ಅದೇ ಸಂದರ್ಭದಲ್ಲಿ ಉಳಿದ ಗ್ರಹಗಳ ಗತಿಯನ್ನೂ ಅವಲಂಬಿಸಿರುವುದರಿಂದ ಅವನ್ನೆಲ್ಲ ತುಲನೆ ಮಾಡಿ ಜಾತಕಫಲವನ್ನು ಹೇಳಿದಾಗ ಅದು ಸತ್ಯವೇ ಆಗಿರುತ್ತದೆ.

ಸಣ್ಣ ಉದಾಹರಣೆಯೊಂದನ್ನು ನಾನಿಲ್ಲಿ ಹೇಳುತ್ತೇನೆ. ನೀವು ಬೆಳಗಿನ ಅಥವಾ ಇಳಿಸಂಜೆಯ ಹೊತ್ತಲ್ಲಿ ದೂರದಿಂದ ನಡೆದು ಬಂದಾಗ ಮಿತ್ರರು ನಿಮಗೆ ತಮಾಷೆಯನ್ನು ಮಾಡಿದರೆ ನೀವೂ ಅದರಲ್ಲಿ ಭಾಗಿಯಾಗುತ್ತೀರಿ. ಆದರೆ ನೀವು ನಡುಮಧ್ಯಾಹ್ನದ ಬಿರುಬಿಸಿಲಿನಲ್ಲಿ ನಡೆದು ಬಂದಾಗ ಮಿತ್ರರು ತಮಾಷೆ ಮಾಡಿದರೆ ನಿಮಗೆ ಕೋಪವುಕ್ಕಿಬರುತ್ತದೆ. “ನಾನು ಸುಡು ಬಿಸಿನಲ್ಲಿ ಬಂದಿದ್ದೇನೆ, ಇವರಿಗೆ ತಮಾಷೆ” ಎಂದುಕೊಳ್ಳುತ್ತೀರಿ. ಅದಕ್ಕೆ ಕಾರಣ ಆ ಬಿಸಿಲು. ಬಿಸಿಲು ಅಂದರೆ ಸೂರ್ಯನ ಬೆಳಕು. ಇದೂ ಸಹ ಗ್ರಹದ ಫಲವೇ ಆಗಿದೆ. ಇಲ್ಲಿ ನಿಮಗೆ ಕೋಪ ಬರುವುದಕ್ಕೆ ಮೂಲಕಾರಣ ನಿಮ್ಮ ದೇಹವನ್ನು ಬಳಲಿಸಿದ ಆ ಸೂರ್ಯಗ್ರಹದ ಬೆಳಕು. ಅಂತೆಯೇ ಎಲ್ಲಾ ನಕ್ಷತ್ರ-ಗ್ರಹಗಳ ಬೆಳಕೂ ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದಾಗಿಯೇ ನಮ್ಮ ಜೀವನದಲ್ಲಿ ಏರುಪೇರುಗಳುಂಟಾಗುತ್ತವೆ. ಜಾತಕವು ಸರಿಯಾಗಿ ಮಾಡಲ್ಪಟ್ಟಿದ್ದರೆ ಅಂದರೆ ಜನನಸಮಯ, ಅಕ್ಷಾಂಶ-ರೇಖಾಂಶ, ವಾರ, ದಿನ ಎಲ್ಲ ಸಂಗತಿಗಳೂ ಸರಿಯಾಗಿದ್ದು ತಯಾರಿಸಿದ ಜಾತಕದ ಫಲವು ಸ್ಪಷ್ಟವಾಗಿಯೇ ಇರುತ್ತದೆ.

ಜಾತಕ ಎಂಬುದೂ ಸಂಸ್ಕಾರವೇ. ಅದರಲ್ಲಿ ಆಗುಹೋಗುಗಳನ್ನು ತಿಳಿದುಕೊಂಡು ನಮ್ಮಿಂದಾಗಬಹುದಾದ ತಪ್ಪನ್ನು ಸರಿ ಮಾಡಿಕೊಳ್ಳಬಹುದು. ಸತ್ಯವಿರದೇ ಹಿಂದಿನಿಂದ ಇವುಗಳು ನಡೆದು ಕೊಂಡುಬಂದಿಲ್ಲ. ಅವುಗಳಲ್ಲೂ ವೈಜ್ಞಾನಿಕ ಸತ್ಯಗಳು ಅಡಗಿವೆ.

ಕೊನೆಯ ಫಲ: ಜೀವನದಲ್ಲಿ ನಂಬಿಕೆಯೇ ನಮ್ಮ ಶಕ್ತಿ; ಅದು ವ್ಯಕ್ತಿ ಇರಲಿ, ವಸ್ತು ಇರಲಿ, ಭಕ್ತಿ ಇರಲಿ ಅಥವಾ ಜಾತಕವೇ ಇರಲಿ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

  •  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here