ಸುಳ್ಯ: ಐವರ್ನಾಡು ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಪ್ರಯುಕ್ತ ರವಿವಾರ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಬೆಳಗ್ಗೆ 8.30ರಿಂದ ಶ್ರೀ ಪಂಚಲಿಂಗೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗ ಪ್ರತಿಷ್ಠೆ, ಆಶ್ಲೇಷಾ ಬಲಿ, ಕಲಶಾ ಭಿಷೇಕ, ತಂಬಿಲ ಸೇವೆ ನಡೆಯಿತು.
ಬೆಳಗ್ಗೆ 108 ಕಾಯಿ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ ನಡೆಯಿತು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಎನ್. ಮನ್ಮಥ ಮತ್ತು ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ ಮತ್ತು ಸದಸ್ಯರು, ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಬಳಿಕ ಸಾಂಸ್ಕೃತಿಕ ವೇದಿಕೆಯಲ್ಲಿ ಸುಳ್ಯ ಶ್ರೀ ಶಾರದಾ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡಿತ್ತು.
ಧಾರ್ಮಿಕ ಸಭೆ
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆ ಪ್ರಯುಕ್ತ ಶನಿವಾರ ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಕುದ್ರೋಳಿ ನಾರಾಯಣ ಗುರು ವಿದ್ಯಾಲಯದ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯೆ ವಿಮಲಾ ರಂಗಯ್ಯ, ಶ್ರೀ ಕ್ಷೇ.ಧ.ಗ್ರಾ. ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕೆ. ಗೋಪಾಲಕೃಷ್ಣ, ಸಾಹಿತಿ ಮಣಿಕ್ಕರ ಗೋಪಾಲಕೃಷ್ಣ ಶಾನುಭಾಗ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಎನ್. ಮನ್ಮಥ, ದಾಮೋದರ ಗೌಡ ಜಬಳೆ, ಕೊರಗಪ್ಪ ಗೌಡ ಪೂಜಾರಿಮನೆ, ಉಮೇಶ ಪಲ್ಲತ್ತಡ್ಕ, ಜೆ.ಟಿ. ವೆಂಕಪ್ಪ, ಜಯಶೀಲ ಬಾಲಚಂದ್ರ ಪಲ್ಲತ್ತಡ್ಕ ಉಪಸ್ಥಿತರಿದ್ದರು.
ಪುರುಷೋತ್ತಮ ಪೂಜಾರಿಮನೆ ಸ್ವಾಗತಿಸಿದರು. ಕಿಶನ್ ಜಬಳೆ ನಿರೂಪಿಸಿ ದರು. ಅನಂತರ ಯಕ್ಷಸಿರಿ ಕಲಾವೇದಿಕೆ ಖಂಡಿಗೆಮೂಲೆ ಅವರಿಂದ ಶಕಟಾಸುರ ವಧೆ ಮತ್ತು ಲವ-ಕುಶ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತ್ತು.
ಇಂದಿನ ಕಾರ್ಯಕ್ರಮ
ಫೆ. 11ರ ಬೆಳಗ್ಗೆ ಮಹಾಗಣಪತಿ ಹೋಮ, ಕೊೖಲ ಉಳ್ಳಾಕುಲು ಭಂಡಾರ ಬರುವುದು, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 10ರಿಂದ ದೈವಗಳ ನಡಾವಳಿ ನಡೆಯಲಿದೆ. ಸಂಜೆ 7ಕ್ಕೆ ಸಾಂಸ್ಕೃತಿಕ ವೇದಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದಿಂದ ನೃತ್ಯ-ಗಾನ-ವೈಭವ ಪ್ರದರ್ಶನಗೊಳ್ಳಲಿದೆ.