ಮಹಾನಗರ: ನಗರದ ದೈವಜ್ಞ ಬ್ರಾಹ್ಮಣರ ಸಂಘದ ಆಶ್ರಯದಲ್ಲಿ ಹೊನ್ನಾವರ ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದೊಂದಿಗೆ ‘ಗಾಯತ್ರಿ ಜಪಯಜ್ಞ – ಮಹಾಯಾಗ ಮತ್ತು ‘ದೈವಜ್ಞ ದರ್ಶನ’ ಕಾರ್ಯಕ್ರಮ ರವಿವಾರ ಬೆಳಗ್ಗೆ ಅಶೋಕ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನೆರವೇರಿತು.
ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ. ಸುಧಾಕರ್ ಶೇಟ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ವಿಶ್ವಹಿಂದೂ ಪರಿಷತ್ ಮಣ್ಣಗುಡ್ಡ ಪ್ರಖಂಡದ ಗೌರವಾಧ್ಯಕ್ಷ, ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ದೇಗುಲದ ಮೊಕ್ತೇಸರರಾದ ಕೆ.ಎಸ್. ನಾಗರಾಜ ಶೇಟ್, ಉದ್ಯಮಿ ರಾಜೇಂದ್ರ ಎಸ್. ರೇವಣ್ಕರ್ ಮುಖ್ಯ ಅಥಿತಿ ಗಳಾಗಿದ್ದರು. ದೈವಜ್ಞ ಯುವಕ ಮಂಡಳಿ ಅಧ್ಯಕ್ಷ ಎ. ಗಣೇಶ್ ಶೇಟ್, ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಕೃಷ್ಣಾನಂದ ಶೇಟ್, ದೈವಜ್ಞ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀಪಾದ ಬಿ. ರಾಯ್ಕರ್ ಉಪಸ್ಥಿತರಿದ್ದರು.
ಪೂರ್ಣಕುಂಭ ಸ್ವಾಗತ
ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಸಮಾಜದ ವತಿಯಿಂದ ಸ್ವಾಮೀಜಿ ಯವರಿಗೆ ಪಾದುಕಾ ಪೂಜೆ ನಡೆಯಿತು. ಈ ಸಂದರ್ಭ ಅಥಿತಿಗಳು ಸ್ವಾಮೀಜಿಯವರನ್ನು ಸಮ್ಮಾನಿಸಿದರು. ದೈವಜ್ಞ ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಎಸ್. ವಿಜಯಕಾಂತ್ ಶೇಟ್ ಪ್ರಸ್ತಾವನೆಗೈದರು. ರಾಜೇಂದ್ರ ಕಾಂತ್ ಶೇಟ್ ಸ್ವಾಗತಿಸಿದರು.