ಸುಬ್ರಹ್ಮಣ್ಯ/ ಬೆಳ್ತಂಗಡಿ/ ಕಟೀಲು: ಆಶ್ಲೇಷಾ ನಕ್ಷತ್ರ ವಿಶೇಷ ದಿನ ಮತ್ತು ಎರಡು ದಿನ ರಜಾದಿನವಿದ್ದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ದೇವಸ್ಥಾನಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
2ನೇ ಗರಿಷ್ಠ ಆಶ್ಲೇಷಾ ಬಲಿ ಸೇವೆ
ಸುಬ್ರಹ್ಮಣ್ಯ: ಆಶ್ಲೇಷಾ ನಕ್ಷತ್ರ ವಿಶೇಷ ವಾಗಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಮತ್ತು ವಿವಿಧ ಸೇವೆಗಳನ್ನು ಪೂರೈಸಿದರು. ರವಿವಾರ 2,203 ಆಶ್ಲೇಷಾ ಬಲಿ ಸೇವೆ ನಡೆದಿರುವುದು ದೇವಸ್ಥಾನದ ಇತಿಹಾಸದಲ್ಲಿಯೇ 2ನೇ ಗರಿಷ್ಠ ದಾಖಲೆ. ಈ ಹಿಂದೆ ಒಂದೇ ದಿನ 2,300 ಆಶ್ಲೇಷಾ ಬಲಿ ಸೇವೆ ನಡೆದಿರು ವುದು ದಾಖಲೆಯಾಗಿತ್ತು. ಸಂಜೆಯೂ ಆಶ್ಲೇಷಾ ಸೇವೆಗಳು ನಡೆದವು.ಇದ ಲ್ಲದೇ ನಾಗಪ್ರತಿಷ್ಠೆ 423, ಮಹಾ ಪೂಜೆ 114, ಮಹಾಭಿಷೇಕ 7, ಉತ್ಸವಗಳು 25, ತುಲಾಭಾರ 130 ಮತ್ತು 188 ಸರ್ಪ ಸಂಸ್ಕಾರ ಸೇವೆ ನಡೆದಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಶನಿವಾರವೇ ದೇವಸ್ಥಾನದ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿ ದ್ದವು. ರವಿವಾರ ಬಂದವರಿಗೆ ತಂಗಲು ಕೊಠಡಿ ಸಮಸ್ಯೆ ಉಂಟಾಯಿತು.
ರವಿವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದರು. ಬೆಳಗ್ಗೆ ಆರು ಗಂಟೆಯಿಂದ ಉದ್ದನೆಯ ಸಾಲಿನಲ್ಲಿ ನಿಂತು ಭಕ್ತರು ಈ ಎಲ್ಲ ಸೇವೆ, ಹರಕೆ ನೆರವೇರಿಸಿದರು. ಭಕ್ತರನ್ನು ನಿಯಂತ್ರಿಸಲು ಗೃಹರಕ್ಷಕ ಮತ್ತು ಭದ್ರತಾ ಸಿಬಂದಿ ಹರಸಾಹಸ ಪಡುತ್ತಿದ್ದರು.
ವಾಹನಗಳ ಸಾಲು
ಕ್ಷೇತ್ರದಲ್ಲಿ ಭಕ್ತರ ಜತೆ ವಾಹನ ದಟ್ಟಣೆಯೂ ಅಧಿಕವಿತ್ತು. ಕ್ಷೇತ್ರದಲ್ಲಿರುವ ಪಾರ್ಕಿಂಗ್ ಜಾಗಗಳು ಭರ್ತಿಯಾಗಿ ಮುಖ್ಯ ರಸ್ತೆಯಲ್ಲೆ ವಾಹನ ಗಳನ್ನು ನಿಲ್ಲಿಸಬೇಕಾಯಿತು. ಕುಮಾರಧಾರೆಯಿಂದ ರಥಬೀದಿ ತನಕ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿಯಿಂದ ನಗರದ ಪರಿಸರವಿಡೀ ಧೂಳು ಆವರಿಸಿ ಕೊಂಡಿದೆ. ರವಿವಾರ ಭಕ್ತರು ಧೂಳಿನ ಸಮಸ್ಯೆಗೆ ತುತ್ತಾದರು.
ಧರ್ಮಸ್ಥಳದಲ್ಲಿ ಭಕ್ತ ಸಂದಣಿ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. 45ರಿಂದ 50 ಸಾವಿರ ಭಕ್ತರು ದೇವರ ದರ್ಶನ ಪಡೆದು ಬಳಿಕ ಅನ್ನಪ್ರಸಾದ ಸ್ವೀಕರಿಸಿದರು. ಅಣ್ಣಪ್ಪ ಗುಡಿ, ಭಗವಾನ್ ಬಾಹುಬಲಿ ಬೆಟ್ಟ, ವಸ್ತುಸಂಗ್ರಹಾಲಯ, ನೇತ್ರಾವತಿ ಸ್ನಾನಘಟ್ಟ ಪಾರ್ಕಿಂಗ್ ಪ್ರದೇಶಗಳು ಭಕ್ತರಿಂದ ತುಂಬಿದ್ದವು.
ಉಡುಪಿ, ಕೊಲ್ಲೂರಲ್ಲೂ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ರವಿವಾರ ಭಾರೀ ಜನಸಂದಣಿ ಇತ್ತು. ಮಧ್ಯಾಹ್ನ 6,000ಕ್ಕೂ ಹೆಚ್ಚು ಜನರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆಂದು ತಿಳಿದುಬಂದಿದೆ. ಸರತಿ ಸಾಲು ಹೆಚ್ಚಿಗೆ ಇರುವ ಇಂತಹ ಸಂದರ್ಭ ಈಗ ಬದಲಾದ ಪ್ರವೇಶದ ಮಾರ್ಗದಲ್ಲಿ ನೆರಳು ಇದ್ದ ಕಾರಣ ಯಾತ್ರಿಕರಿಗೂ ಬಿಸಿಲ ತಾಪದ ಅನುಭವವಾಗಿರಲಿಲ್ಲ.
ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ರವಿವಾರ ಮಧ್ಯಾಹ್ನ ಭಾರೀ ಜನಸಂದಣಿ ಇತ್ತು. ವಾರದ ರಜಾದಿನ ಮತ್ತು ಶಾಲಾಮಕ್ಕಳ ಯಾತ್ರಾಸ್ಥಳ ವೀಕ್ಷಣೆ ಕಾರ್ಯಕ್ರಮ ಇದಕ್ಕೆ ಕಾರಣ. 5ರಿಂದ ಆರು ಸಾವಿರ ಭಕ್ತರು ಮಧ್ಯಾಹ್ನ ದೇವಿಯ ದರ್ಶನ ಪಡೆದರು.
ಕಟೀಲು: ನಂದಿನಿ ನದಿಯ ಹುಟ್ಟು ಹಬ್ಬ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸುತ್ತ ಹರಿಯುವ ನಂದಿನಿ ನದಿಯ ಹುಟ್ಟುಹಬ್ಬವನ್ನು ರವಿವಾರ ಸಂಭ್ರಮದಿಂದ ಆಚರಿಸಲಾಯಿತು. ಈ ದಿನ ದುರ್ಗೆಗೆ ನಂದಿನಿ ನದಿಯ 108 ಕೊಡ ನೀರಿನ ಅಭಿಷೇಕ, ಹಾಲಿನ ಅಭಿಷೇಕ, ಎಳನೀರಿನ ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 4,000ಕ್ಕೂ ಹೆಚ್ಚು ಹೂವಿನ ಪೂಜೆ ನಡೆಯಿತು.
ಅಪಾರ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ಭಕ್ತರಿಗೆ ಅನ್ನಪ್ರಸಾದದ ಜತೆ ಕ್ಷೀರ ಪಾಯಸ ಉಣಬಡಿಸಲಾಯಿತು ಸುಮಾರು 20 ಸಾವಿರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.