ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು, ಈಗ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ರಾತ್ರಿಯೂ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ದೇವಸ್ಥಾನದ ವತಿಯಿಂದ ರಾತ್ರಿಯೂ ಅನ್ನದಾಸೋಹ ನಡೆಸಬೇಕು ಎಂಬ ಆಗ್ರಹ ಭಕ್ತಸಮೂಹದಿಂದ ಕೇಳಿಬಂದಿದೆ.ರಾತ್ರಿಯ ವೇಳೆ ಹರಕೆ ತೀರಿಸಲು ಭಕ್ತರಿಗೆ ದೇವಸ್ಥಾನದ ಆಸುಪಾಸಿನಲ್ಲಿ ಊಟದ ಮಂದಿರಗಳೆಲ್ಲೂ ಇಲ್ಲ. ಕೆಲವೊಂದು ಪೂಜಾ ವಿಧಿವಿಧಾನಗಳು ರಾತ್ರಿ ವೇಳೆ ನಡೆಯುವುದರಿಂದ ಇದನ್ನು ಸಲ್ಲಿಸಲು ನೂರಾರು ಭಕ್ತರು ಆಗಮಿಸುತ್ತಿದ್ದಾರೆ.
ಆದರೆ ದೇವಸ್ಥಾನದ ವತಿಯಿಂದ ರಾತ್ರಿ ವೇಳೆ ಅನ್ನದಾಸೋಹದ ವ್ಯವಸ್ಥೆ ಇಲ್ಲದೇ ಇರುವುದರಿಂದ ಭಕ್ತರು ಖಾಲಿ ಹೊಟ್ಟೆಯಲ್ಲಿಯೇ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾತ್ರಿಯೂ ಅನ್ನದಾಸೋಹ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.ಆರಂಭಕ್ಕೆ ಚಿಂತನೆ ಪೊಳಲಿಯಲ್ಲಿ ರಾತ್ರಿ ವೇಳೆ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ರಾತ್ರಿ ಅನ್ನದಾಸೋಹ ನಡೆಸಬೇಕೆಂಬ ಆಗ್ರಹ ಭಕ್ತ ವಲಯದಿಂದ ಕೇಳಿಬಂದಿದೆ. ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಅನ್ನದಾಸೋಹ ಆರಂಭಿಸುವ ಚಿಂತನೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಸಭೆ ಕರೆದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.- ಪ್ರವೀಣ್,ಕಾರ್ಯನಿರ್ವಹಣಾಧಿಕಾರಿ, ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿ