Home ಧಾರ್ಮಿಕ ಸುದ್ದಿ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ

ನಾಡಿನ ವಿವಿಧ ಭಾಗಗಳಿಂದ ಹರಿದು ಬಂದ ಜನಸಾಗರ

2503
0
SHARE

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ನಾಡಿನ ವಿವಿಧ ಭಾಗಗಳಿಂದ ಜನಸಾಗರವೇ ಹರಿದು
ಬರುತ್ತಿದೆ. ಆರಂಭದ ಎರಡು ದಿನಗಳಲ್ಲಿ ಕಡಿಮೆಯಿದ್ದ ಜಸಂಖ್ಯೆ ಮಂಗಳವಾರ ರಾತ್ರಿ, ಬುಧವಾರ ಭಾರೀ ಏರಿಕೆಯಾಗಿದೆ. ಲಕ್ಷಾಂತರ ಮಂದಿ ವಾರ್ಷಿಕ ಮಹೋತ್ಸವಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಹೊರರಾಜ್ಯಗಳ ಜನರೂ ಈ ವಾರ್ಷಿಕ ಮಹೋತ್ಸವಕ್ಕೆ ಪ್ರತಿ ವರ್ಷ ಬರುತ್ತಾರೆ. ವಾರ್ಷಿಕ ಮಹೋತ್ಸವದ ದಿವ್ಯ ಬಲಿಪೂಜೆ ನಡೆಯುವ ಸಂದರ್ಭ ಚರ್ಚ್‌ ಸಭಾಂಗಣ ಭಕ್ತರಿಂದ ತುಂಬುತ್ತಿದೆ. ಇಲ್ಲಿನ ವಾರ್ಷಿಕ ಮಹೋತ್ಸವದಲ್ಲಿ ಪ್ರತೀ ವರ್ಷ 8ರಿಂದ 12 ಲಕ್ಷ ಮಂದಿ ಭಾಗಿಯಾಗುತ್ತಾರೆ. ಪ್ರಮುಖವಾಗಿ ವಿವಿಧ ಕಾರಣಗಳಿಂದ ಸಮಸ್ಯೆ ಎದುರಾದಾಗ ಅತ್ತೂರು ಚರ್ಚ್‌ಗೆ ಮೊಂಬತ್ತಿ ಉರಿಸುವ ಹರಕೆ ಹೇಳಿರುತ್ತಾರೆ. ಹೀಗಾಗಿ ಮೊಂಬತ್ತಿ ಉರಿಸಿ ಹರಕೆ ತೀರಿಸಲು ಜನ ಆಗಮಿಸುವುದು ವಾಡಿಕೆ. ಜನಪ್ರತಿನಿಧಿಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ನಗರದಲ್ಲೂ ಹೆಚ್ಚಿದ ಜನಸಂಖ್ಯೆ
ವಾರ್ಷಿಕ ಮಹೋತ್ಸವದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸುವ ಜನರು ಕಾರ್ಕಳ ನಗರಕ್ಕೆ ಆಗಮಿಸದೇ ನೇರವಾಗಿ ಬಸಿಲಿಕಗೆ ತೆರಳುತ್ತಾರೆ. ಬಸ್‌ಗಳನ್ನು ಅವಲಂಬಿಸಿ ಬರುವವರು ಕಾರ್ಕಳ ನಗರಕ್ಕೆ ಆಗಮಿಸಬೇಕಾಗುತ್ತದೆ. ಹೀಗಾಗಿ ನಗರದಲ್ಲಿಯೂ ಜನಸಂಖ್ಯೆ ಹೆಚ್ಚಿದೆ. ಬಸ್‌ ಗಳಲ್ಲೂ ಹೌಸ್‌ಫ‌ುಲ್‌ ಇದೆ.

ಹೀಗೊಂದು ಐತಿಹಾಸಿಕ ಹಿನ್ನೆಲೆ
ಅತ್ತೂರು ಮಹೋತ್ಸವಕ್ಕೆ ಕರಾವಳಿ ಪ್ರದೇಶದ ಭಕ್ತರು ಮಾತ್ರವಲ್ಲ, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಇನ್ನಿತರ ದೂರದ ಸ್ಥಳಗಳಿಂದ ಮಹೋತ್ಸವಕ್ಕೆ ಆಗಮಿಸುತ್ತಿದ್ದು, ಇದಕ್ಕೊಂದು ಚಾರಿತ್ರಿಕ ಕಾರಣವಿದೆ.

ಟಿಪ್ಪು ಸುಲ್ತಾನನ ಮರಣದ ಬಳಿಕ ಶ್ರೀರಂಗಪಟ್ಟಣದ ಸೆರೆಯಿಂದ ಹಿಂದಿರುಗಿದ ಕೆಥೊಲಿಕ್‌ ಕ್ರೈಸ್ತರು, ಕರಾವಳಿಗೆ ಹಿಂದಿರುಗದೆ ಚಿಕ್ಕಮಗಳೂರು, ಮೈಸೂರು ಭಾಗದಲ್ಲಿ ವಿಶೇಷವಾಗಿ ಚಿಕ್ಕಮಗಳೂರಿನ ಘಟ್ಟ ಪ್ರದೇಶಗಳಲ್ಲಿ ನೆಲೆನಿಂತು ಕಾಫಿ ತೋಟಗಳಲ್ಲಿ ಮತ್ತು ಇನ್ನಿತರ ಕೆಲಸವನ್ನು ಆರಂಭಿಸಿದರು. ಆದರೂ ವರ್ಷಕ್ಕೊಮ್ಮೆ ತಮ್ಮ ಮೂಲವಾದ ಕರಾವಳಿಗೆ ಭೇಟಿ ನೀಡುತ್ತಿದ್ದರು.

ಇವರೆಲ್ಲರೂ ಕಾರ್ಕಳದ ಪುರಾತನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಭಕ್ತಾದಿಗಳಾದ್ದರಿಂದ, ಅತ್ತೂರಿಗೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. ಕಾಫಿ ತೋಟಗಳಲ್ಲಿ ಕೆಲಸದ ಕೂಲಿ ದೊರಕುವುದು ತಿಂಗಳಾಂತ್ಯದಲ್ಲಿ ಆದ್ದರಿಂದ, ಇತರ ದಿನಗಳಲ್ಲಿ ಅವರಲ್ಲಿ ಖರ್ಚಿಗೆ ಹಣವಿರುತ್ತಿರಲಿಲ್ಲ. ಅವರು ಹಬ್ಬದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ, ಸಂತ ಲಾರೆನ್ಸರ ಹಬ್ಬವನ್ನು ಜನವರಿ ತಿಂಗಳ ಕೊನೆಯ ವಾರದಲ್ಲಿ ಆಚರಿಸಲಾಗಿದೆ.

ಇಂದಿಗೂ ಆ ಭಾಗದ ಸಾವಿರಾರು ಭಕ್ತರು ಅತ್ತೂರಿನ ಮಹೋತ್ಸವಕ್ಕೆ ಆಗಮಿಸಿ, ಕೆಲವು ರಾತ್ರಿ ಇಲ್ಲಿಯೇ ಉಳಿದು, ಪೂಜೆಯಲ್ಲಿ ಪಾಲ್ಗೊಂಡು ತಮ್ಮೂರಿಗೆ ಹಿಂತಿರುಗುತ್ತಾರೆ ಎನ್ನುವುದು ಫಾ| ಚೇತನ್‌ ಅವರ ಅಭಿಪ್ರಾಯ.

ಸರ್ವಧರ್ಮದವರೂ ಭಾಗಿ
ಇಲ್ಲಿನ ವಾರ್ಷಿಕ ಮಹೋತ್ಸವದಲ್ಲಿ ಕೇವಲ ಕ್ರೈಸ್ತರು ಮಾತ್ರ ಭಾಗವಹಿಸುವುದಿಲ್ಲ. ಹಿಂದುಗಳು, ಮುಸ್ಲಿಂ ಧರ್ಮದವರೂ ಕೂಡ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅದೇರೀತಿ ಇಲ್ಲಿ ಹರಕೆಯನ್ನೂ ಸಲ್ಲಿಸುತ್ತಾರೆ. ವಿಶೇಷವೆಂದರೆ ಕ್ರೈಸ್ತ ಧರ್ಮದವರಿಗಿಂತ ಇತರ ಧರ್ಮದ ಜನರೇ ವಾರ್ಷಿಕ ಹಬ್ಬದಲ್ಲಿ ಭಾಗವಹಿಸುತ್ತಾರೆ ಎನ್ನುವುದು ಕೆಲವರ ಅಭಿಪ್ರಾಯ.

ಸುರಕ್ಷತೆಗೆ ಆದ್ಯತೆ
ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ವೇಳೆ ಅಲ್ಲಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದೆ. ಆದರೆ ಭಕ್ತರಿಗೆ ತೊಂದರೆಯಾಗದಂತೆ ನೂರಾರು ಮಂದಿ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಾರ್ಕಿಂಗ್‌ಗೆ ವಿಶಾಲವಾದ ಮೈದಾನಗಳಿವೆ., ಕುಡಿಯವ ನೀರು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ಜಿವೇಂದ್ರ ಶೆಟ್ಟಿ

LEAVE A REPLY

Please enter your comment!
Please enter your name here