Home ಧಾರ್ಮಿಕ ಸುದ್ದಿ ಇಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಬ್ರಹ್ಮರಥೋತ್ಸವ

ಇಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಬ್ರಹ್ಮರಥೋತ್ಸವ

2834
0
SHARE

ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಇದೀಗ ಬ್ರಹ್ಮರಥೋತ್ಸವದ ಸಂಭ್ರಮದಲ್ಲಿರುವ ದೇವಸ್ಥಾನದಲ್ಲಿ ಉತ್ಸವದ ತಯಾರಿಗಳು ಪೂರ್ಣಗೊಂಡಿದೆ. ಉಡುಪಿ-ಕುಂದಾಪುರ ನಡುವಿನ ಹೆದ್ದಾರಿಯಿಂದ ಒಂದು ಕಿ.ಮೀ ಪೂರ್ವಕ್ಕೆ ನಿಸರ್ಗ ರಮಣೀಯವಾದ ಸ್ಥಳದಲ್ಲಿ ಕಂಗೊಳಿಸುವ ಈ ಪುಣ್ಯಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳ‌ಲ್ಲಿಯೇ ಅತೀ ಪುರಾತನವಾಗಿದೆ. ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ನಿತ್ಯವೂ ಯಾತ್ರಾರ್ಥಿಗಳಾಗಿ ಬಂದು ಶ್ರೀ ದೇವರ ದರ್ಶನ ಪಡೆದು ಸೇವೆಯನ್ನು ಮಾಡಿ ಇಷ್ಟಾರ್ಥವನ್ನು ಪಡೆದು ಕೃತಾರ್ಥರಾಗುತ್ತಾರೆ.

ಪೌರಾಣಿಕ ಹಿನ್ನೆಲೆ
ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿಯು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾ ಯುಗದಲ್ಲಿ ಮುಧುಕಾನ ನವೆಂದೂ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರವೆಂದೂ ಹಾಗೂ ಕಲಿಯುಗ ದಲ್ಲಿ ಈ ಕ್ಷೇತ್ರವನ್ನು ಕುಂಭಾಸಿ ಎಂದು ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಟಿ ಯಿಂದ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದರು ಹೀಗೆ ಈ ಕ್ಷೇತ್ರ ಯುಗಾಂತರ ಗಳಿಂದಲೂ ಪವಿತ್ರವಾದುದು ಎಂದು ಪುರಾಣ ಹೇಳುತ್ತದೆ.

ದೇವಳದ ಜೀರ್ಣೋದ್ಧಾರ
1985ರಲ್ಲಿ ಪೇಜಾವರ ಮಠಾ ಧೀಶರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸಮಿತಿ ಮೂಲಕ ದೇವಸ್ಥಾನದ ಪೌಳಿ, ಹೆಬ್ಟಾಗಿಲು,ಗೋಪುರ, ಯಜ್ಞಮಂಟಪ, ಭೋಜನ ಶಾಲೆ, ಅತಿಥಿಗƒಹ, 2000ನೇ ಇಸವಿಯಲ್ಲಿ ಬƒಹತ್‌ ಭೋಜನ ಶಾಲೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಇದೀಗ 55 ರಿಂದ 60 ಲಕ್ಷ ರೂ.ವೆಚ್ಚದಲ್ಲಿ ಭೋಜನ ಶಾಲೆಯ ಮೇಲಂತಸ್ಥಿನ ಕಟ್ಟಡ ಹಾಗೂ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಸತ್ಯನಾರಾಯಣ ಮಂದಿರ ಹಾಗೂ ಸುಮಾರು 3ಕೆ.ಜಿ ತೂಕದ ಚಿನ್ನವನ್ನು ಬಳಸಿಕೊಂಡು ಅಂದಾಜು ರೂ. 92 ಲಕ್ಷ ವೆಚ್ಚವನ್ನು ಸಂಪೂರ್ಣ ಭಕ್ತಾದಿಗಳ ಸಹಕಾರದೊಂದಿಗೆ ದೇವಳದ ವತಿಯಿಂದಲೇ ಸುವರ್ಣ ಉತ್ಸವ ಪ್ರಭಾವಳಿ ( ಉತ್ಸವ ಮೂರ್ತಿ ಕವಚ ಸಹಿತ ) ಹಾಗೂ ಸುಮಾರು ರೂ. 70 ಲಕ್ಷ ವೆಚ್ಚದ ಶ್ರೀ ವಿಶ್ವೇಶ್ವರ ಯಜ್ಞ ಮಂಟಪವನ್ನು ಪರಮ ಪೂಜ್ಯ ಶ್ರೀ ವಿದ್ಯಾ ಸಾಗರ ತೀರ್ಥ ಪಾದಂಗಳವರು ಉದ್ಘಾಟಿಸಿದ್ದಾರೆ. ಆಡಳಿತ ಮಂಡಳಿಯ ಹಾಗೂ ಅರ್ಚಕ ಮಂಡಳಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ಉತ್ಸವಕ್ಕೆ ಅನುಕೂಲವಾಗುವಂತೆ ನೂತನ ಸುವರ್ಣ ಪಲ್ಲಕ್ಕಿಯಲ್ಲಿ ವಿಶೇಷ ಪೂಜೆಯಂದು ಶ್ರೀ ದೇವರು ವಿರಾಜಮಾನನಾಗಿ ವಿಜೃಂಭಿಸುತ್ತಾರೆ. 2ಕೆ.ಜಿ. 17 ಗ್ರಾಂ ತೂಕದ ಸುಮಾರು ರೂ. 56 ಲಕ್ಷ ಮೌಲ್ಯದ ಸ್ವರ್ಣ ಕಲಶದ ಶ್ರೀ ದೇವರಿಗೆ ಸಮರ್ಪಣೆಗೈಯಲಾಗಿದೆ. ಪ್ರಸ್ತುತ ವರ್ಷ ದೇವಾಲಯ ಆರ್ಥಿಕವಾಗಿ ಹಿಂದುಳಿದವರ ವೈದ್ಯಕೀಯ ನೆರವಿಗಾಗಿ ಧನ ಸಹಾಯವನ್ನು ನೀಡುತ್ತಾ ಬಂದಿದೆ.

ಕುಂಭಾಸಿ ಅಂದರೆ…
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತನಾದ ಗೌತಮ ಮುನಿಗಳ ಯಜ್ಞ ಯಾಗಾದಿಗಳಿಗೆ ಭಂಗ ಬರ ತೊಡಗಿತು. ವನವಾಸ ನಿರತರಾದ ಪಾಂಡವರ ಆಗಮನವನ್ನು ತಿಳಿದ ಗೌತಮರು ಧರ್ಮರಾಜನಿಗೆ ಕುಂಭಾಸುರನ ಪೀಡೆಯನ್ನು ತಿಳಿಯಪಡಿಸಿದಾಗ ಧರ್ಮರಾಜನು ಲೋಕ ಕಂಟಕನಾದ ಕುಂಭಾಸುರನ್ನು ಸಂಹರಿಸಲು ಭೀಮಸೇನನಿಗೆ ಅಪ್ಪಣೆಕೊಟ್ಟನು. ಅದೇ ವೇಳೆ ಭೀಮಸೇನ ಯುದ್ಧಕ್ಕೆ ಸನ್ನದ್ಧನಾದ ಭೀಮ ಮತ್ತು ಕುಂಭಾಸುರ ನಡುವೆ ಭೀಕರ ಯುದ್ಧ ನಡೆಯಿತು. ಯುದ್ಧದಲ್ಲಿ ಕುಂಭಾಸುರನು ಅವಧ್ಯನಾಗಿಯೇ ಉಳಿದಿದ್ದು ಅವನ ಸಂಹರಿಸುವ ಬಗ್ಗೆ ಚಿಂತಿಸುತ್ತ ಭೀಮ ಸೇನನು ಶಿಬಿರಕ್ಕೆ ಹಿಂತಿರುಗುವಾಗ “ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ವಧ್ಯನು’ ಎಂಬ ಅಶರೀರವಾಣಿಯನ್ನು ಕೇಳಿ ಭೀಮಸೇನನು ವಿಶ್ವಂಭರ ರೂಪಿ ಪರಮಾತ್ಮನನ್ನು ಧ್ಯಾನಿಸಿ ಆನೆಯ ರೂಪದಿಂದ ಭಗವಂತನು ನೀಡಿದ ಕತ್ತಿಯಿಂದ ಅಸುರನನ್ನು ಸಂಹರಿಸಿದನೆಂದು ಐತಿಹ್ಯವಿದೆ ಆದ್ದರಿಂದ ಈ ಕ್ಷೇತ್ರ ಕುಂಭಾಸಿ ಎಂದು ಪ್ರಸಿದ್ಧವಾಯಿತು. ಶ್ರೀ ವಾದಿರಾಜ ಯತಿ ವರೇಣ್ಯರು ತೀರ್ಥ ಪ್ರಬಂಧ ಗ್ರಂಥದಲ್ಲಿ ಭೀಮಸೇನನು ಕುಂಭಾಸುರನನ್ನು ಕತ್ತಿ (ಅಸಿ)ಯಿಂದ ಸಂಹರಿಸಿದ ಕಾರಣ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ.

ಆನುವಂಶಿಕ ಅರ್ಚಕತನ ಮತ್ತು ಆನುವಂಶಿಕ ಆಡಳಿತ ಮಂಡಳಿ
ಸುಮಾರು ಏಳು ತಲೆಮಾರಿನ ಹಿಂದೆ ಶಿವಳ್ಳಿ ಬ್ರಾಹ್ಮಣ ವರ್ಗದ ಉಪಾಧ್ಯಾಯ ಕುಟುಂಬದ ಪೂರ್ವಜರಿಗೆ ಒಬ್ಬ ಬ್ರಹ್ಮಾಚಾರಿ ಕನಸಿನಲ್ಲಿ ಕೈ ಹಿಡಿದು ಕರೆದುಕೊಂಡು ಬಂದು ಈಗಿರುವ ದೇವಾಲಯದ ಸಮೀಪ ಕಾನನದ ನಡುವೆ ಬಿಟ್ಟು ಹೋದಂತಾಯಿತು ಕನಸಿನಲ್ಲಿ ಕಂಡಂತೆಯೇ ಕಾನನದ ನಡುವೆ ರತಕ್ಕ ಈ ಭಾಗಕ್ಕೆ ಬಂದು ನೋಡಿದಾಗ ಸುಮಾರು ಎಂಟು ಅಡಿ ವಿಸ್ತೀರ್ಣವುಳ್ಳ ಒಂದು ಕಪ್ಪು ಶಿಲೆಯಲ್ಲಿ ಆನೆಯ ಅಸ್ಪಷ್ಟ ರೂಪದಲ್ಲಿ ಗೋಚರವಾಗಿ ಅದರ ಮೇಲೆ ಬಕುಲಾದಿ ಹೂಗಳು ಚೆಲ್ಲಿರುವುದು ಕಂಡು ಬಂತು ಎಂದು ಹೇಳಲಾಗುತ್ತಿದೆ.

ಗಣಪತಿಯು ಆನೆಯ ರೂಪದಲ್ಲಿ ಬಂದು ಕುಂಭಾಸುರನನ್ನು ಸಂಹರಿಸಿದ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆನೆಯಾಕಾರದಲ್ಲಿ ಗಣಪತಿ ಉದ್ಭವಿಸಿದನು. ಸೊಂಡಿಲಿನ ಆಕಾರವಿರುವ ಈ ಮುಖ ಭಾಗಕ್ಕೆ ಮಾತ್ರ ನಿತ್ಯ ಪೂಜಾದಿಗಳು ವಿನಿಯೋಗಾದಿಗಳು ನಡೆಯುತ್ತಿದ್ದವು. ಈ ನಾಗಚಲದಲ್ಲಿ (ಆನೆಗುಡ್ಡೆ ನಾಗಚಲವೆಂದು ಪುರಾಣ ಪ್ರಸಿದ್ಧಿ )ಆನೆಯ ರೂಪದಲ್ಲಿ ಪ್ರತ್ಯಕ್ಷನಾದ ಗಣಪತಿಯು ಇಂದು ಭಕ್ತರ ಇಷ್ಟಪ್ರದಾಯಕನಾಗಿ ವಿರಾಜಮಾನನಾಗಿ ಕಂಗೊಳಿಸುತ್ತಿದ್ದಾನೆ.

LEAVE A REPLY

Please enter your comment!
Please enter your name here