Home ಧಾರ್ಮಿಕ ಸುದ್ದಿ ನೋಡ ಬನ್ನಿ ಕದಳೀ ಪ್ರಿಯ ಅನಂತ ಪದ್ಮನಾಭನ ವಾರ್ಷಿಕ ರಥೋತ್ಸವ

ನೋಡ ಬನ್ನಿ ಕದಳೀ ಪ್ರಿಯ ಅನಂತ ಪದ್ಮನಾಭನ ವಾರ್ಷಿಕ ರಥೋತ್ಸವ

1781
0
SHARE

ಬಾಲ್ಯದ ದಿನಗಳನ್ನು ಮೆಲುಕು ಹಾಕುವಾಗ ಕಣ್ಣ ಮುಂದೆ ಬರುವ ಚಿತ್ರಗಳು, ಹಲವಾರು ಬಾಲ್ಯದ ಸ್ನೇಹಿತರು, ಶಾಲಾ ಆಟ ಪಾಠಗಳು, ಮೋಜು ಮಸ್ತಿ, ಹಬ್ಬ ಹರಿದಿನಗಳು ಒಂದೇ… ಎರಡೇ… ಇವೆಲ್ಲದರ ಜೊತೆಗೆ ನನ್ನ ಬಾಲ್ಯದ ದಿನಗಳ ಅಚ್ಚು ಮೆಚ್ಚಿನ ಸಂಗತಿಯೆಂದರೆ ನಮ್ಮೂರ ಜಾತ್ರೆ. ನಮ್ಮ ಕದಳೀ ಪ್ರಿಯ ಅನಂತನ ಜಾತ್ರೆ

ಜಾತ್ರೆಯೆಂದರೆ ಅದೇನೋ ಸಂಭ್ರಮ, ಸಡಗರ. ವರ್ಷವಿಡೀ ಜಾತ್ರೆಗಾಗಿ ಕಾಯುವ, ಜಾತ್ರೆ ಬಂದೊಡನೆ ಸಂಭ್ರಮಿಸುವ, ಮುಗಿದೊಡನೆ ಬೇಸರಿಸುವ ಪ್ರಕ್ರಿಯೆಯೆ ಒಂದು ಸೋಜಿಗ. ಜಾತ್ರೆಯೆಂದರೆ ಸಣ್ಣ ಮಕ್ಕಳಿಗೆ ವಿಧವಿಧವಾದ ಆಟಿಕೆಗಳನ್ನು ಕೊಳ್ಳುವ, ಬಗೆ ಬಗೆಯ ಮಿಠಾಯಿಗಳನ್ನು ಕೊಳ್ಳುವ, ಅಮ್ಮ ತಯಾರಿಸಿದ ಪಾಯಸವನ್ನು ತಿನ್ನುವ ಸಡಗರ. ಯುವಕ, ಯುವತಿಯರಿಗೆ ದೂರದ ಊರಿನಲ್ಲಿ ವಿಧ್ಯಾಭ್ಯಾಸ, ವೃತ್ತಿಗೆ ತೆರಳಿ, ಜಾತ್ರೆಗೆಂದೇ ಮರಳಿ ಬಂದಿರುವ ತಮ್ಮ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ. ಅಮ್ಮಂದಿರಿಗೆ ಪರವೂರಿನಲ್ಲಿ ನೆಲೆಸಿರುವ ತಮ್ಮ ಮಕ್ಕಳ ನಿರೀಕ್ಷೆ, ಮಕ್ಕಳಿಗೆ ವಿಧ ವಿಧವಾದ ತಿಂಡಿ ತಯಾರಿಸಿ ಕಾಯುವ ತವಕ. ವೃದ್ಧರಿಗೆ ಅನಂತನ ವೈಭವದ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳುವ ಬಯಕೆ.

ಇಷ್ಟೆಲ್ಲಾ ನಿರೀಕ್ಷೆಗಳಿಗೆ ಕಾರಣನಾದ ನಮ್ಮ ಪೆರ್ಡೂರಿನ ಅನಂತನ ಬಗ್ಗೆ ಒಂದೆರೆಡು ವಿವರಣೆಗಳನ್ನು ನೀಡಲೇಬೇಕು.. ಉಡುಪಿ- ಆಗುಂಬೆ ರಾಜ್ಯ ಹೆದ್ದಾರಿಯ ನಡುವೆ ಸಿಗುವ ಸುಂದರವಾದ ಹಳ್ಳಿಯೇ ಪೆರ್ಡೂರು. ಉಡುಪಿಯಿಂದ ಸುಮಾರು 22 ಕಿ.ಮೀ. ದೂರದಲ್ಲಿರುವ ಈ ಹಳ್ಳಿ, ನಿಸರ್ಗದ ರಮಣೀಯತೆಯಿಂದ ಮೈದುಂಬಿದೆ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಪೆರ್ಡೂರು ಎಂದಾಕ್ಷಣ ಜನರಿಗೆ ನೆನಪಾಗುವುದು ಶ್ರೀ ಅನಂತ ಪದ್ಮನಾಭ ದೇವಸ್ಥಾನ.

ನಮ್ಮ ಹಳ್ಳಿಗೆ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳದ ಗರಿಮೆಯನ್ನು ತಂದು ಕೊಟ್ಟಿರುವುದು ಶ್ರೀ ಅನಂತ ಪದ್ಮನಾಭನ ಮಹಿಮೆ. ಸ್ಥಳ ಪುರಾಣದ ಪ್ರಕಾರ ಈ ದೇವಸ್ಥಾನವನ್ನು ಕಟ್ಟಿಸಿದ್ದು ಕೃಷ್ಣ ಶರ್ಮನೆಂಬ ಬ್ರಾಹ್ಮಣ. ಇವನು ನೆಲೆಸಿದ್ದು ರಾಜಾ ಶಂಕರನ ಆಳ್ವಿಕೆಗೆ ಒಳಪಟ್ಟಿದ ಕೋಟಿ ಕುಂಜ ಪ್ರಾಂತ್ಯದಲ್ಲಿ. ಈ ದೇವಾಲಯ 6-7 ಶತಮಾನದಷ್ಟು ಹಳೆಯದೆಂದು ಹೇಳಲಾಗುತ್ತದೆ. ದೇವಾಲಯವನ್ನು ಕಟ್ಟಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದವರಿಗೆ, ದಟ್ಟ ಕಾಡಿನ ಮಧ್ಯೆ ಒಂದು ದನವು ಹುತ್ತಕ್ಕೆ ಹಾಲೆರೆಯುತ್ತಿರುವುದು ಕಾಣಿಸುತ್ತಿದೆ. ಈ ಪ್ರಕ್ರಿಯೆಯನ್ನು ನೋಡುತ್ತಾ ಹುಲಿಯೊಂದು ಪಕ್ಕದಲ್ಲಿಯೇ ಸುಮ್ಮನೆ ಕುಳಿತಿತ್ತಂತೆ. ಈ ವಿಸ್ಮಯವನ್ನು ನೋಡಿದ ಜನರು ದೇವಸ್ಥಾನ ಕಟ್ಟಲು ಇದೇ ಸೂಕ್ತವಾದ ಜಾಗ ಎಂಬ ನಿರ್ಣಯಕ್ಕೆ ಬಂದರು ಎಂಬ ಪ್ರತೀತಿಯಿದೆ. ಇದರಿಂದಾಗಿಯೇ ಈ ಊರಿಗೆ `ಪೇರುಂಡ ಊರು’ ಎಂಬ ಹೆಸರು ಬಂತು. ಕಾಲಕ್ರಮೇಣ ಅದು ಪೆರ್ಡೂರು ಆಯಿತು.

ದೇವಸ್ಥಾನದ ಗರ್ಭಗುಡಿಯಲ್ಲಿರುವ ಅನಂತನ ವಿಗ್ರಹ 2 ಅಡಿ ಎತ್ತರವಾಗಿದ್ದು, ಶಂಕ, ಚಕ್ರ, ಅಭಯ ಹಸ್ತದೊಂದಿಗೆ ಸುಂದರ ಹಾಗೂ ಆಕರ್ಷಿಣೆಯವಾಗಿದೆ. ದೇವಸ್ಥಾನದ ಉತ್ತರ ಭಾಗದಲ್ಲಿ ಸುಂದರವಾದ ಪದ್ಮ ಸರೋವರವಿದೆ. ಕಲ್ಲಿನ ಮೆಟ್ಟಿಲುಗಳಿಂದ ಕೂಡಿರುವ ಈ ಪುಷ್ಕರಣಿಯು ದೇವಾಲಯದ ಸೌಂದರ್ಯವನ್ನು ಇಮ್ಮಡಿಸಿದೆ.

ಪ್ರಬಲವಾದ ದೈವಿಕ ಶಕ್ತಿಯಿಂದ ಆವೃತನಾದ ಶ್ರೀ ಅನಂತ ಪದ್ಮನಾಭ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಈ ದೇವರಿಗೆ ಬಾಳೆ ಹಣ್ಣೆಂದರೆ ಎಲ್ಲಿಲ್ಲದ ಪ್ರೀತಿ. ಇದರಿಂದಾಗಿಯೇ ಇವನನ್ನು `ಕದಳೀ ಪ್ರಿಯ’ ಎಂದು ಕರೆಯುತ್ತಾರೆ. ಭಕ್ತರು ಪ್ರೀತಿಯಿಂದ ನಮ್ಮ ಅನಂತನಿಗೆ ನೀಡುವ ಸೇವೆಯೆಂದರೆ `ಸಾವಿರ ಬಾಳೆಹಣ್ಣಿನ ಸೇವೆ’.

ವರ್ಷಂಪ್ರತಿ ಮಾರ್ಚ್ 16 ರಂದು ನಡೆಯುವ ಶ್ರೀಮನ್ಮಹಾ ರಥೋತ್ಸವದ ಸಂಭ್ರಮ ಆರಂಭಗೊಳ್ಳುವುದು ಮಾರ್ಚ್ 13 ನೇ ತಾರೀಕಿನ ಧ್ವಜಾರೋಹಣದೊಂದಿಗೆ. ಮಾರ್ಚ್ 14 ರಂದು ಮೀನ ಸಂಕ್ರಮಣದ ಸಡಗರ. ಅಂದಿನ ರಾತ್ರಿ ನಡೆಯುವ ಕಂಚಿಲ ಸೇವೆ ನೋಡುಗರ ಕಣ್ಣಿಗೆ ಹಬ್ಬ. ಉತ್ಸವದ ಸಮಯದಲ್ಲಿ ಪ್ರತಿ ರಾತ್ರಿ ದೀವಟಿಗೆ ಪೂಜೆ, ಉತ್ಸವ ಬಲಿ, ಪನ್ನಗೋತ್ಸವ, ಶೇಷ ವಾಹನ, ವಾಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ, ನಿತ್ಯ ಬಲಿ, ಸವಾರಿ ಬಲಿ ಮತ್ತು ಕಟ್ಟೆ ಪೂಜೆಗಳು ನಡೆಯುತ್ತದೆ.

ಮಾರ್ಚ್ 16 ರಂದು ಅನಂತನಿಗೆ ಸಾವಿರಾರು ಭಕ್ತಾದಿಗಳ ನಡುವೆ ಬ್ರಹ್ಮರಥೋತ್ಸವದ ಸಂಭ್ರಮ. ಬೆಳಗಿನಿಂದಲೇ ಪ್ರಧಾನಹೋಮ, ಕಲಶಾಭಿಷೇಕ, ರಥಹೋಮ, ರಥ ಸಂಪ್ರೋಕ್ಷಣೆ, ಕೊಡಿ ಪೂಜೆ, ಮಹಾಪೂಜೆಗಳು ನಡೆದು, ಮಧ್ಯಾಹ್ನ ಘಂಟೆ 11.30 ಕ್ಕೆ ಉತ್ಸವ ಮೂರ್ತಿ ಬ್ರಹ್ಮರಥವನ್ನೇರುತ್ತಾನೆ. ಸಂಜೆ 6 ಗಂಟೆಗೆ ನಡೆಯುತ್ತದೆ ಮಹತೋಭಾರ ಶ್ರೀ ಅನಂತ ಪದ್ಮನಾಭನ ಬ್ರಹ್ಮ ರಥೋತ್ಸವದ ವೈಭವ. ಈ ವೈಭವ ಶಬ್ಧಗಳಿಗೆ ನಿಲುಕದ್ದು. ಊರ ಪರವೂರ ಸಾಂಸ್ಕೃತಿಕ ಕಲಾತಂಡಗಳು ಈ ಮಾರ್ಚ್ 17 ರಂದು ನಡೆಯುವ ಸಂಭ್ರಮದ ಆರಾಟೋತ್ಸವದ ಅನಂತನ ಸೌಂದರ್ಯ, ಶಕ್ತಿ ಮಹಿಮೆಗಳನ್ನು ಜನರು ಕಣ್ತುಂಬಿಕೊಳ್ಳುವ ಪರ್ವಕಾಲ. ಹೀಗಿರುವಾಗ ನಮ್ಮ ಪೆರ್ಡೂರು ಅನಂತ ಪದ್ಮನಾಭನ ವಾರ್ಷಿಕ ರಥೋತ್ಸವವನ್ನು ನೋಡಲು ಮರೆಯದೇ ಬನ್ನಿ.

ಉಷಾರಾಣಿ ಕಾಮತ್

LEAVE A REPLY

Please enter your comment!
Please enter your name here