Home Uncategorized ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಪೂರ್ವಜನ್ಮದ ಪುಣ್ಯದ ಫಲದಿಂದ ದೇವರ ಸೇವೆಯ ಭಾಗ್ಯ: ಎಡನೀರು ಶ್ರೀ

901
0
SHARE
ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕುಂಬಳೆ : ಭಕ್ತಿಯಿಂದ ಮಾಡುವ ದೇವರ ಸೇವೆಯ ಪುಣ್ಯ ಜೀವನದಲ್ಲಿ ಎಂದೆಂದೂ ಶಾಶ್ವತವಾಗಿ ಉಳಿಯುವುದು. ಪೂರ್ವಜನ್ಮದ ಪುಣ್ಯದ ಫಲದಿಂದ ದೇವರ ಸೇವೆಯ ಭಾಗ್ಯ ಭಕ್ತರಿಗೆ ದೊರೆಯುವುದು.ಭಕ್ತರ ನಿಸ್ವಾರ್ಥ ಸತ್ಕರ್ಮಗಳಿಂದ ಪುಣ್ಯ ಪ್ರಾಪ್ತಿಯಾಗುವುದು. ದಾನಧರ್ಮ, ದೀನದಲಿತರ ಸೇವೆ, ಉತ್ತಮ ಆಚಾರ ವಿಚಾರಗಳಿಂದ ದೇವರ ಅನುಗ್ರಹ
ದೊರೆಯುವುದಾಗಿ ಎಡನೀರು ಮಠಾಧೀಶ ಶ್ರೀ ಕೇಶವಾನಂದಭಾರತಿ ಸ್ವಾಮೀಜಿಯವರು ನುಡಿದರು.

ಮಂಗಲ್ಪಾಡಿ ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವವನ ನೀಡಿ ಮಾತನಾಡಿದ ಪೂಜ್ಯರು ನಮ್ಮ ಹಿರಿಯರಿಂದ ಅಲ್ಲಲ್ಲಿ ಸ್ಥಾಪನೆಗೊಂಡ ದೈವ ದೇವಸ್ಥಾನಗಳು ಮಠಮಂದಿರಗಳು ನಮ್ಮ ಒಳಿತಿಗಾಗಿದ್ದು ಇದು ಭಕ್ತರಿಗೆ ಇಂಬು ಕೊಡುವ ಕೇಂದ್ರವಾಗಿರುವುದೆಂದರು. ಇದನ್ನು ಕಾಪಾಡುವ ಕೆಲಸ ಭಕ್ತರಿಂದ ಆಗಬೇಕಾಗಿದೆ ಎಂದರು.

ಕೊಂಡೆವೂರು ಶ್ರೀ ನಿತ್ಯಾನಂದಪೀಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದರು. ವಿದ್ವಾನ್‌ ಹಿರಣ್ಯ ವೆಂಕಟೇಶ ಭಟ್‌ ತನ್ನ ಧಾರ್ಮಿಕ ಉಪನ್ಯಾಸದಲ್ಲಿ ಇಂದು ದೇಶದಲ್ಲಿ ಧರ್ಮಚಿಂತನೆಯ ಕೊರತೆ ಕಾಡುತ್ತಿದೆ ಧರ್ಮಸ್ವರೂಪ ಪ್ರಕಟಿಸಲು ಪ್ರತ್ಯೇಕ ಧಾರ್ಮಿಕ ಸಭೆಗಳು ನಡೆಯಬೇಕಾಗಿದೆ. ಮಿಕ್ಕ ಧರ್ಮಗಳಿಗಿಂತ ಸನಾತನ ಧರ್ಮ ಶ್ರೇಷ್ಠವಾಗಿದೆ. ಭಗವಂತನ ಆರಾಧನೆಗೆ ಕ್ಷೇತ್ರಗಳ ಮತ್ತು ತೀರ್ಥ ಕ್ಷೇತ್ರಗಳ ನಿರ್ಮಾಣವಾಗಿದೆ ಇಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವು ಹೆಚ್ಚಾಗಿ ಭಾಗವಹಿಸಬೇಕಾಗಿದೆ. ಭಗವಂತನ ಸಾನ್ನಿಧ್ಯದಲ್ಲಿ ಧ್ಯಾನದಿಂದ ಜ್ಞಾನ, ಶಾಂತಿ ದೊರೆಯುವುದು. ಸನಾತನ ಪರಂಪರೆಯಲ್ಲಿ ಭಗವತ್‌ ಆರಾಧನೆಗೆ ವಿಶೇಷ ಪ್ರಾಶಸ್ತ್ಯವಿರುವುದಾಗಿ ಹೇಳಿದರು.

ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಬೊಳ್ಳಾರು ನಾರಾಯಣ ಶೆಟ್ಟಿ, ದಿನೇಶ ಮಡಪ್ಪುರ, ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಐ.ಎನ್‌. ರೈ, ಡಾ| ರಮೇಶ್‌ ರಾವ್‌, ಪಿಲಿ ಯಂದೂರು ಪ್ರಭಾಕರ ಆಳ್ವ, ಪಿ.ಆರ್‌. ಶೆಟ್ಟಿ ಪೊಯ್ಯೆಲು, ಶಂಕರನಾರಾಯಣ ಕುಬಣೂರಾಯ, ಶಿವಾನಂದ ಆಚಾರ್ಯ ಪ್ರತಾಪ ನಗರ, ಸತೀಶ ಶೆಟ್ಟಿ ಕುಡಾಲು, ದಿನೇಶ್‌ ವಿ., ಅಶೋಕ ಹೊಳ್ಳ ಪೆರಿಂಗಡಿ, ಕೊರಗಪ್ಪ ಎಸ್‌. ಶೆಟ್ಟಿ ಸಣ್ಣ ಹಿತ್ತಿಲು, ದೇರಂಬಳ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ರಘು ಚೆರುಗೋಳಿ ಸ್ವಾಗತಿಸಿದರು. ಬಾಲಕೃಷ್ಣ ಅಂಬಾರ್‌ ವಂದಿಸಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ನಿರೂಪಿಸಿದರು

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾತೃಶ್ರೀ ಯಕ್ಷಬಳಗ, ಪಂಜ ಇವರಿಂದ ತಾಳ ಮದ್ದಳೆ ಶ್ರೀ ರಾಮದರ್ಶನ ಮತ್ತು ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಜಾಂಬವತಿ ಕಲ್ಯಾಣ ಮತ್ತು ಅಗ್ರಪೂಜೆ ಪ್ರದರ್ಶನಗೊಂಡಿತು.

ಶುಕ್ರವಾರದ ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದವು. ಸಂಜೆ ಸುದರ್ಶನ ಹೋಮ, ತ್ರಿಕಾಲ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಮಾತೃ ಸಂಗಮದಲ್ಲಿ ಗಣ್ಯರು ಭಾಗವಹಿಸಿದರು.

‘ಬ್ರಹ್ಮಕಲಶದಲ್ಲಿ ಮಿಂದು ಪಾವನರಾಗಿರಿ’
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ತಮ್ಮ ಅನುಗ್ರಹ ಭಾಷಣದಲ್ಲಿ ಇಂದು ಅತಿಬುದ್ಧಿವಂತರೆನಿಸಿಕೊಳ್ಳುವವರ ಅತಿಯಾದ ಜ್ಞಾನದಿಂದ ಹಿಂದೂ ಸಮಾಜಕ್ಕೆ ಕೆಡುಕಾಗುತ್ತಿದೆ. ಭಗವಂತನಿಲ್ಲವೆನ್ನುವ ನಾಸ್ತಿಕ ಮೂರ್ಖರಿಂದ ಅಸಹಿಷ್ಣುತೆಗೆ ಎಡೆಯಾಗುತ್ತಿದೆ. ಇಂದಿನ ಆಧುನಿಕ ಜೀವನದಿಂದ ದೇವತಾರಾಧನೆ ಹರಿಕೀರ್ತನೆ, ಧಾರ್ಮಿಕ ಚಿಂತನೆ ಕುಂಠಿತವಾಗುತ್ತಿದೆ. ಮಕ್ಕಳು ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ವಿಶೇಷ ಚೈತನ್ಯವಿರುವ ಹಿಂದೂದೇಶ ಸುಜ್ಞಾನದ ತವರು. ಸನಾತನ ಧರ್ಮವನ್ನು ಹೊಂದಿದ ನಮ್ಮ ದೇಶ ಉನ್ನತ ಸ್ಥಾನದಲ್ಲಿದೆ. ಮುಂದಿನ ಪೀಳಿಗೆಗೆ ಧರ್ಮ ಸಂಸ್ಕಾರಗಳ ಕುರಿತು ಮಾತಾಪಿತರು ಎಳವೆಯಲ್ಲೇ ತಿಳಿಹೇಳಬೇಕಾಗಿದೆ. ಕ್ಷೇತ್ರಗಳ ಬ್ರಹ್ಮ ಕಲಶೋತ್ಸವದೊಂದಿಗೆ ಸಮಸ್ತ ಹಿಂದೂಸಮಾಜ ಬ್ರಹ್ಮಕಲಶದಲ್ಲಿ ಮಿಂದು ಪಾವನವಾಗಬೇಕೆಂದರು.

LEAVE A REPLY

Please enter your comment!
Please enter your name here