Home ಧಾರ್ಮಿಕ ಸುದ್ದಿ ಫೆ. 21-25: ಅಲಂಕಾರಗುಡ್ಡೆ ದೈವಸ್ಥಾನದ ಪುನಃ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ

ಫೆ. 21-25: ಅಲಂಕಾರಗುಡ್ಡೆ ದೈವಸ್ಥಾನದ ಪುನಃ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ

2031
0
SHARE
ಅಲಂಕಾರಗುಡ್ಡೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಸ್ಥಾನದ ನಕಾಶೆ

ತಲಪಾಡಿ: ಅಲಂಕಾರಗುಡ್ಡೆ ದೈವಸ್ಥಾನದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸತ್ಕರ್ಮ ಫೆ. 21ರಿಂದ 25ರ ವರೆಗೆ ಬಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇ|ಮೂ| ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್‌ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ ತಿಳಿಸಿದರು.

ಕ್ಷೇತ್ರದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಅಂದಾಜು ಸುಮಾರು 75ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸುವುದೆಂಬ ಯೋಜನೆ ಹಾಕಲಾಗಿತ್ತು. ಆದರೆ ವಾಸ್ತು ಶಿಲ್ಪಿ ಮುನಿಯಂಗಳ ಕೃಷ್ಣ ಭಟ್‌ ಅವರ ನಿರ್ದೇಶನದಂತೆ ಗರ್ಭಗುಡಿ, ಚಾವಡಿ, ಸುತ್ತುಪೌಳಿ, ಗೋಪುರ, ಪಾಗರ ಕ್ಷೇತ್ರದ ಅಭ್ಯುದಯ ದೃಷ್ಟಿಯಲ್ಲಿ ಒಂದಕ್ಕೊಂದು ಹೊಂದಾಣಿಕೆ ಆಗುವುದಿಲ್ಲವೆಂಬ ಕಾರಣದಿಂದ ಮೆಟ್ಟಿಲ ಸಣ್ಣ ಕಲ್ಲು ಸಮೇತ ಎಲ್ಲವನ್ನು ನೂತನ ಸಾಮಗ್ರಿ ಬಳಸಿ ನಿರ್ಮಾಣ ಮಾಡ ಲಾಗುತ್ತಿದೆ. ಕ್ಷೇತ್ರದ ಕಾರಣಿಕಕ್ಕೆ ಸಾಕ್ಷ್ಯವಾಗಿ ನ. 9ರಂದು ಶಿಲಾನ್ಯಾಸ ನಡೆದಿದ್ದು, ಅಂದಾಜು ಮೂರು ಕೋಟಿ ರೂ. ವೆಚ್ಚವಾಗಲಿದೆ. ಫೆ. 25ರಂದು ನೂತನ ಆಲಯದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಡಾವಳಿ ನಿರ್ಣಯ, ಶ್ರೀ ದೈವಗಳಿಗೆ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.

ಫೆ. 20ರಂದು ಸಂಜೆ ಗಂಟೆ 5.00ಕ್ಕೆ ಸಾಮೂಹಿಕ ಪ್ರಾರ್ಥನೆ, ಶಿಲ್ಪಿಯಿಂದ ಆರೂಢ ಪರಿಗ್ರಹ, ಸ್ವಸ್ಥಿ ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ವಾಸ್ತುಹೋಮ,ದಿಕ್ಪಾಲಕ ಬಲಿ, ಬಿಂಬಾ ವಾಸಗಳು ನಡೆಯಲಿದೆ.

ಫೆ.21ರಂದು ಬೆಳಗ್ಗೆ 6ರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.00ಕ್ಕೆ ದೇವರ ಮಹಾಪೂಜೆ, ವಟು ಆರಾಧನೆ. ಫೆ. 23ರಂದು ಸಂಜೆ ಗಂಟೆ 4.00ಕ್ಕೆ ಕೋಟೆಕಾರು ಬೀರಿ ಶ್ರೀ ಗಣೇಶ ಮಂದಿರದ ಬಳಿಯಿಂದ ಆರಂಭಗೊಳ್ಳುವ ಹಸಿರುಹೊರೆ ಕಾಣಿಕೆ ಶೋಭಾಯಾತ್ರೆಗೆ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಚಾಲನೆ ನೀಡಲಿದ್ದಾರೆ.

ಫೆ. 24ರಂದು ಮಧ್ಯಾಹ್ನ ಗಂಟೆ 2.00ಕ್ಕೆ ‘ಶರಸೇತು ಬಂಧನ’ ಯಕ್ಷಗಾನ ತಾಳಮದ್ದಳೆ, ರಾತ್ರಿ ಗಂಟೆ 9.30ಕ್ಕೆ ‘ಊರ್ವಶಿ ಶಾಪ, ಕನಕಾಂಗಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಆರ್‌. ಪದ್ಮರಾಜ್‌ ಅಧ್ಯಕ್ಷತೆ ವಹಿಸಲಿದ್ದು, ಸದಾನಂದ ಶೆಟ್ಟಿ ಉದ್ಘಾಟಿಸುವರು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಧಾರ್ಮಿಕ ಉಪನ್ಯಾಸ ನೀಡುವರು. ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.

ಫೆ. 25ರಂದು ಮಧ್ಯಾಹ್ನ 2.00 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಗಂಟೆ 7.00ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಂದರು.

ವ್ಯವಸ್ಥಾಪನ ಸಮಿತಿ ಸದಸ್ಯ ಸಚ್ಚಿದಾನಂದ ಶೆಟ್ಟಿ ಹೊಸಮನೆ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಯ ಮಾರ್ಲ ಉಳಿಪಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಬಿ. ಮೋಹನ್‌ದಾಸ ಗಾಂಭೀರ, ಅಧ್ಯಕ್ಷ ಡಾ| ಜಯಪಾಲ ಶೆಟ್ಟಿ ದೊಡ್ಡಮನೆ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಕೆ.ಸಿ. ಆಳ್ವ ನೆತ್ತಿಲಬಾಳಿಕೆ, ಉಪಾಧ್ಯಕ್ಷ ರಾಮಯ್ಯ ಕಿಲ್ಲೆ ಮೇಗಿನ ಪಂಜಾಲಗುತ್ತು, ಮಲರಾಯ ದೈವಸ್ಥಾನದ ಪಾತ್ರಿ ಅಂತ ಪೂಜಾರಿ, ಹೊರೆಕಾಣಿಕೆ ನಿರ್ವಹಣ ಸಮಿತಿಯ ಪ್ರಧಾನ ಸಂಚಾಲಕ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಗೋಪಾಲಕೃಷ್ಣ ಮೇಲಂಟ ಬೊಳ್ಯಗುತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here