ಆಲಂಕಾರು: ಧೋ ಎಂದು ಸುರಿಯುವ ಮಳೆ, ಆಗಾಗ ಮೈ ಸುಡುವ ಬಿಸಿಲು. ಇಂತಹ ಸಮಯದಲ್ಲಿ ಹೊರಗಡೆ ಗಗ್ಗರ. ತೆಂಬರೆ ಹಾಗೂ ಪಾಡ್ದನದ ಶಬ್ದ ಕೇಳುತ್ತದೆ. ಮನೆ ಬಾಗಿಲಿಗೆ ಆಟಿ ಕಳಂಜನ ಆಗಮನವಾಗಿದೆ!
ತುಳು ನಾಡಿನಲ್ಲಿ ಆಟಿ (ಆಷಾಢ) ತಿಂಗಳು ಬೇಸಾಯದ ಕೃಷಿ ಕಾಯಕಗಳೆಲ್ಲ ಮುಗಿದು, ಗ್ರಾಮೀಣ ಜನತೆ ವಿಶ್ರಾಂತಿ ಪಡೆಯುವ ಸಮಯ. ಈ ಅವಧಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಿತ್ತರಿಸಲು ಮನೆ ಮನೆಗೆ ಬರುತ್ತಾನೆ, ಆಟಿ ಕಳಂಜ.
ಯಾರಿದು ಆಟಿಕಳಂಜ?
ಅನಾದಿ ಕಾಲದಲ್ಲಿ ತುಳು ನಾಡಿನ ಜನರಿಗೆ ವಿಚಿತ್ರ ರೋಗವೊಂದು ಬಾಧಿಸಿ, ಎಲ್ಲರೂ ನರಳುತ್ತಿದ್ದರಂತೆ. ಆಗ ನಾಗಬ್ರಹ್ಮ ದೇವರು ನಾಡಿನ ರೋಗ (ಮಾರಿ) ಕಳೆಯಲು ಆಟಿಕಳಂಜನನ್ನು ಭೂಮಿಗೆ ಕಳುಹಿಸುತ್ತಾನೆ. ಭೂಮಿಗೆ ಬಂದ ಆಟಿಕಳಂಜ ಮನೆ ಮನೆಗೆ ತೆರಳಿ, ಮಾರಿಯನ್ನು ಓಡಿಸಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿ, ಜನರನ್ನು ಹರಸುತ್ತಾನೆ. ಕೃತಜ್ಞತೆಯ ಪ್ರತೀಕವಾಗಿ ಜನರು ನೀಡುವ ಭತ್ತ, ಅರಿಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸುಗಳನ್ನು ಪಡೆದು ಊರನ್ನು ಉದ್ಧರಿಸುತ್ತಾನೆ. ಆಟಿ ಕಳಂಜ ನಾಗಬ್ರಹ್ಮನ ಸೃಷ್ಟಿ. ಈಗಲೂ ಪ್ರತಿ ವರ್ಷ ಆಟಿ ತಿಂಗಳಲ್ಲಿ ಆಟಿ ಕಳಂಜ ಮನೆ ಮನೆಗೆ ಬಂದು, ಜನರು ನೀಡುವ ದವಸ- ಧಾನ್ಯಗಳನ್ನು ಸ್ವೀಕರಿಸುತ್ತಾನೆ.
ಆಟಿ ಕಳಂಜ ಸೇವೆಯನ್ನು ನಲಿಕೆ ಹಾಗೂ ಪಂಬತ್ತ ಜನಾಂಗದವರು ಮಾತ್ರ ಮಾಡುತ್ತಾರೆ. ಆಟಿ ತಿಂಗಳು ಭಾರೀ ಮಳೆ ಬರುವ ಸಮಯ. ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚು. ಆಧುನಿಕ ವೈದ್ಯ ಲೋಕಕ್ಕೂ ಸವಾಲಾಗಬಲ್ಲ ಕಾಯಿಲೆಗಳು ಹೊಸದಾಗಿ ವಕ್ಕರಿಸುತ್ತವೆ. ಹಿಂದಿನ ಕಾಲದಲ್ಲಂತೂ ಸಮರ್ಪಕ ಔಷಧ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳಿರಲಿಲ್ಲ. ದೇವರೇ ರೋಗ – ರುಜಿನಗಳಿಂದ ತಮ್ಮನ್ನು ಪಾರು ಮಾಡಬೇಕು ಎಂದು ಜನ ಪ್ರಾರ್ಥಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಟಿ ಕಳಂಜ ಮನೆಗೆ ಬಂದು ಹರಸಿದರೆ ರೋಗ ಬಾಧಿತನಿಗೆ ಒಂದಷ್ಟು ಧೈರ್ಯ, ಸಮಾಧಾನ. ಇದರಿಂದ ಆರೋಗ್ಯ ಸುಧಾರಿಸುತ್ತಿತ್ತು. ಇದು ಆಟಿ ಕಳಂಜನ ಪ್ರಭಾವ ಎಂದೇ ಜನ ಬಲವಾಗಿ ನಂಬಿದರು.
ಆಟಿಯ 16 ದಿನಗಳು
ಆಟಿ ಕಳಂಜ ತಿಂಗಳ ಮೂವತ್ತು ದಿನವೂ ಊರು ಸುತ್ತುವುದಿಲ್ಲ. ಆರಂಭದಿಂದ ಹದಿನಾರು ದಿನ ಮಾತ್ರ ಊರ ಮಾರಿ ಕಳೆಯಲು ನಾಡಿಗೆ ಇಳಿಯುತ್ತಾನೆ. ಕಾಲಿಗೆ ಹಾಳೆಯಿಂದ ಮಾಡಿದ ಕವಚದ ರಕ್ಷಣೆಯಲ್ಲಿ ಗಗ್ಗರವನ್ನು ಕಟ್ಟಿ, ತೆಂಗಿನ ಗರಿಯಿಂದ ನಿರ್ಮಿಸಿದ ಸಿರಿಯನ್ನು ಸೊಂಟಕ್ಕೆ ಬಿಗಿದು ಮುಖಕ್ಕೆ ವಿಶೇಷ ಬಣ್ಣ ಬಳಿದುಕೊಂಡು ಪಣೋಲಿ ಮರದ ಗರಿಯಿಂದ ನಿರ್ಮಿಸಿದ ಕೊಡೆಯನ್ನು ಹಿಡಿದುಕೊಂಡು ‘ಕಳೆಂಜ ಕಳೆಂಜೆನಾ ಆಟಿದ ಕಳೆಂಜೆನಾ ಊರುದ ಮಾರಿ ಕಳೆಯರೆಂದ್ ಆಟಿದ ಕಳೆಂಜೆ ಬತ್ತೇನಾ’ ಎಂಬ ಹಾಡನ್ನು ಹೇಳಿಕೊಂಡು ಸಹಾಯಕ ಬಡಿಯುವ ತೆಂಬರೆಯ ತಾಳಕ್ಕೆ ಹೆಚ್ಚೆ ಹಾಕುತ್ತ ಕಳಂಜ ಮನೆ ಬಾಗಿಲಿಗೆ ಬರುತ್ತಾನೆ. ಬಳಿಕ ಗದ್ದೆ, ತೋಟಗಳಿಗೆ ಹಾಗೂ ಕೃಷಿಗೂ ತಟ್ಟಿದ ಮಾರಿಯನ್ನು ಕಳೆಯುತ್ತಾನೆ. ಹೀಗೆ ಹದಿನಾರು ದಿನ ಮಾತ್ರ ತಿರುಗಾಟ ನಡೆಸಿ ಕೊನೆಯ ದಿನ ತನ್ನೆಲ್ಲ ಪರಿಕರಗಳನ್ನು ಊರಿನ ಗಡಿಯಲ್ಲಿರುವ ಕಾಸರಕನ ಮರಕ್ಕೆ ಕಟ್ಟಿ, ‘ಊರಿಗೆ ಬಂದ ಮಾರಿ ಏಳು ಕಡಲಾಚೆಗೆ ಬೀಳಲಿ’ ಎಂದು ಪ್ರಾರ್ಥನೆ ಸಲ್ಲಿಸಿ ತಿರುಗಾಟ ಕೊನೆಗೊಳಿಸುತ್ತಾನೆ.
ಬೇರೆ ಬೇರೆ ಅವತಾರ
ಆಟಿ ಕಳಂಜನಿಗೆ ಕಿನ್ನಿಕಳಂಜ ಸಾಥ್ ನೀಡುತ್ತಾನೆ. ಕಿನ್ನಿಕಳಂಜ ಸೇವೆಯನ್ನು ಪೂರೈಸಿದ ಬಳಿಕ ಆಟಿ ಕಳಂಜ ಊರ ಸೇವೆ ಮಾಡಲು ತೆರಳುತ್ತಾನೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ ಸೋಣದ ಮದಿಮಾಲ್, ಜಾರ್ತೆ ಯಲ್ಲಿ(ನವೆಂಬರ್) ಮಾದಿರ, ಮತ್ತು ಸುಗ್ಗಿ (ಮಾರ್ಚ್) ತಿಂಗಳಲ್ಲಿ ಕೊರಗ-ತನಿಯ ಹೀಗೆ ಬೇರೆ ಬೇರೆ ಅವತಾರಗಳಲ್ಲಿ ನಾಗಬ್ರಹ್ಮಣ ಸೃಷ್ಟಿಯಾದ ಆಟಿ ಕಳಂಜ ನಾಡಿಗೆ ಬಂದು ಕಷ್ಟಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ.