Home ನಂಬಿಕೆ ಸುತ್ತಮುತ್ತ ಅಕ್ಷ ಯ ತೃತೀಯ ಎಂಬ ಸಮೃದ್ಧಿಯ ಸುದಿನ

ಅಕ್ಷ ಯ ತೃತೀಯ ಎಂಬ ಸಮೃದ್ಧಿಯ ಸುದಿನ

1911
0
SHARE
ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯ ದಿನವನ್ನು ಅಕ್ಷಯ ತೃತಿಯ ಎಂದು ವಿಶೇಷದಿನವನ್ನಾಗಿ ಆಚರಿಸಲಾಗುತ್ತದೆ. ಲಕ್ಷ್ಮೀದೇವಿಯ ರೂಪವಾದ ಧನಕನಕಾದಿ ಸಂಪತ್ತನ್ನು ವೃದ್ಧಿಸಿಕೊಳ್ಳುವ ದಿನವೂ ಇದಾಗಿದೆ. ಅಲ್ಲದೆ ಉತ್ತಮ ಕಾರ್ಯಗಳನ್ನು ಮನೆಯಲ್ಲಿ ಮಂಗಳಕಾರ್ಯಗಳನ್ನು ಈ ದಿನದಂದು ನಡೆಸುವುದು ತುಂಬಾ ಶುಭಕರವೆಂಬ ನಂಬಿಕೆ ಇದೆ.
ಈ ದಿನದ ವಿಶೇಷವೆಂದರೆ ಭಗೀರಥನ ಪ್ರಯತ್ನದಿಂದ ಗಂಗಾವತರಣವಾದ ದಿನವೂ ಇದೇ ದಿನ. ಲಕ್ಷ್ಮಿಯ ಜನ್ಮ ದಿನವೂ ಹೌದು. ವೇದವ್ಯಾಸರ ಮಹಾಭಾರತವನ್ನು ಗಣಪತಿಯು ಬರೆಯಲು ಆರಂಭಿಸಿದ ದಿನವೂ ಇದೇ ಆಗಿದೆ. ಕೃಷ್ಣನ ಅಣ್ಣ ಬಲರಾಮನ ಜನ್ಮದಿನವೂ ಇದೇ ದಿನದಂದು. ಪರಶುರಾಮಾವತಾರದ ಆರಂಭದ ದಿನ, ಕೃಷ್ಣ ದ್ರೌಪದಿಗೆ ಅಕ್ಷಯಪಾತ್ರೆಯನ್ನು ಕರುಣಿಸಿದ ದಿನ, ಲಕ್ಷ್ಮೀಯನ್ನು ಪೂಜಿಸಿ ವಲಿಸಿಕೊಂಡು ಕುಬೇರ ಹಣವಂತನಾದ ದಿನ ಹೀಗೆ ಹಲವಾರು ಶುಭಘಟನೆಗಳು ನಡೆದ ದಿನವೆಂದು ಉಲ್ಲೇಖಿತವಾಗಿರುತ್ತದೆ.
ಕ್ಷಯ ಎಂದರೆ ಕಳೆದುಕೊಳ್ಳುವುದು. ಕಡಿಮೆಯಾಗುತ್ತ ಹೋಗುವುದು. ಕ್ಷಯದ ವಿರುದ್ಧಪದ ಅಕ್ಷಯ. ಹೆಚ್ಚುತ್ತಲೇ ಇರುವುದು ಅಥವಾ ಯಾವತ್ತಿಗೂ ಕಡಿಮೆಯಾಗದ್ದು ಎಂದರ್ಥ. ಈ ದಿನವು ವರ್ಷದ ಮೂರುವರೆ ಶುಭಗಳಿಗೆಗಳಲ್ಲಿ ಒಂದಾಗಿದೆ. ಹಾಗಾಗಿ ಒಳ್ಳೆಯ ಕಾರ್ಯಗಳಿಗೆ ಈ ದಿನದಂದು ದಿನ, ಮಹೂರ್ತ, ತಾರಾಮೇಳಗಳನ್ನು ನೋಡಬೇಕಾಗಿಲ್ಲ. ಈ ದಿನ ನಡೆಸಿದ ಕಾರ್ಯಗಳಿಂದ ಉನ್ನತಿ ಸಿದ್ಧಿಸುತ್ತದೆ. ಹಾಗಾಗಿ ಹೆಚ್ಚಿನವರು ಇದೇ ದಿನ ಭೂಮಿ ಖರೀದಿ, ಚಿನ್ನಾಭರಣಗಳ ಖರೀದಿ, ಮನೆಗೆ ಬೇಕಾಗುವ ವಸ್ತುಗಳ ಖರೀದಿ, ಕಾರು, ಬೈಕು ಮೊದಲಾದ ವಾಹನಗಳ ಖರೀದಿ ಹೀಗೆ ಹಲವು ಹೊಸ ವಸ್ತುಗಳ ಖರೀದಿಗೆ ಇದು ಸುದಿನ. ಅಲ್ಲದೆ ಮದುವೆ, ಉಪನಯನ, ಗ್ರಹಪ್ರವೇಶ, ಹೋಮಹವನ, ಅನ್ನದಾನ ಮೊದಲಾದ ಶುಭಕಾರ್ಯಗಳನ್ನು ಈದಿನ ಮಾಡಿದರೆ ಶ್ರೇಯಸ್ಸು ಲಭಿಸುತ್ತದೆ.
ಅಕ್ಷಯ ತೃತೀಯ ಎಂಬುದು ಒಂದು ಒಳ್ಳೆಯ ಕೆಲಸವನ್ನು ಆರಂಭ ಮಾಡುವ ಸುದಿನ. ನಾವು ಕೇವಲ ವಸ್ತುಗಳಿಗಷ್ಟೇ ಇದನ್ನು ಸೀಮಿತವಾಗಿಸಿಕೊಂಡು ಹೊಸ ಉಪಕರಣಗಳನ್ನೋ ಆಭರಣಗಳನ್ನೋ ಕೊಂಡುಕೊಂಡು ಅಕ್ಷಯ ತೃತೀಯವನ್ನು ಆಚರಿಸುತ್ತೇವೆ. ಆದರೆ ಇಂತಹ ಶುಭದಿನದಂದು ನಾವು ಉತ್ತಮವಾದ ದೇವರಿಗೆ ಪ್ರೀತಿಯಾದ ಸತ್ಕಾರ್ಯಗಳನ್ನು ಮಾಡಬೇಕು; ಆರಂಭಿಸಬೇಕು. ಆ ಕಾರ್ಯವು ನಿರಂತರವಾಗಿರಬೇಕು. ದುರ್ಮಾರ್ಗದಲ್ಲಿ ನಡೆಯುವವರನ್ನು ಸರಿದಾರಿಗೆ ತರುವ ಕಾರ್ಯ, ಸಮಾಜದಲ್ಲಿ ಸದ್ಗುಣಗಳನ್ನು ಬಿತ್ತುವ ಕಾರ್ಯ, ಸತ್ಯದ ನಡೆ ನುಡಿಯ ನಿರ್ಧಾರ ಮೊದಲಾದ ಮುಕ್ತಿ ಮಾರ್ಗಕ್ಕೆ ಅನುಕೂಲವಾಗುವ ಅಲ್ಲದೆ ಆ ಮೂಲಕ ಇಡಿ ಜಗತ್ತಿಗೇ ಒಳಿತಾಗುವ ಕಾರ್ಯದಲ್ಲಿ ತೊಡಗುವ ನಿರ್ಧಾರ ಈ ದಿನದಂದು ಮಾಡಬೇಕು. ಉತ್ತಮ ಸಂಸ್ಕೃತಿಯ ಬೆಳವಣಿಗೆಗೆ ಮುಂದಾಗಬೇಕು.
ಸದ್ಗುಣಗಳು ಕ್ಷಯವಾಗುತ್ತ ಹೋದಂತೆ ಸಂಸ್ಕೃತಿ ಅಕ್ಷಯವಾಗುವುದಾದರೂ ಹೇಗೆ? ಅಕ್ಷಯ ತೃತಿಯ ದಿನ ಒಳ್ಳೆಯ ಕಾರ್ಯಗಳೇ ನಡೆದಿವೆ ಎಂಬುದನ್ನು ಪುರಾಣಗಳು, ಧಾರ್ಮಿಕ ಗ್ರಂಥಗಳು ಸಾರುತ್ತವೆ. ಅಂತಿರುವಾಗ ಈ ಸುದಿನದಿಂದಲೇ ಉತ್ತಮ ಕಾರ್ಯಗಳಿಗೆ ಎಲ್ಲಾ ಜನತೆ ಅಡಿಪಾಯ ಹಾಕಿ ಅದನ್ನು ಮುಂದುವರಿಸಿಕೊಂಡು ಹೋದರೆ ಸುಖ ಸಮೃದ್ಧಿಗೆ ಕ್ಷಯವಿಲ್ಲ.
ಅಕ್ಷಯ ಹಾರೈಕೆ: ಮನದ ಕಣ್ಣು ತೆರೆಯಲಿ ಈ ಸುದಿನ, ಸಂಸ್ಕಾರದ ಹೂ ಅರಳಿ ಶಾಂತಿಯ ಕಂಪ ಸೂಸಲಿ ಜಗದಲಿ, ಆನಂದವು ಅಕ್ಷಯವಾಗಲಿ.
      ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here