ಅಜೆಕಾರು: ಕಳೆದ 7 ವರ್ಷಗಳ ಹಿಂದೆ ಡಾ| ಸಂತೋಷ್ ಕುಮಾರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಅಜೆಕಾರು ಶ್ರೀ ಶಾರದ ಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ಶಾರದೋತ್ಸವವು ಈ ಬಾರಿ 7ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸ್ವಚ್ಛ, ಹಸಿರು, ಸಮೃದ್ಧ ಭಾರತದ ಕಲ್ಪನೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಹಾಗೂ ವಿಶೇಷ ಪೂಜೆ ಸಲ್ಲಿಸಿದವರಿಗೆ ಫಲ ಕೊಡುವ ಗಿಡಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆ ಪ್ರತೀಯೋರ್ವರ ಕರ್ತವ್ಯ ಎಂಬುದನ್ನು ತೋರಿಸುತ್ತದೆ. ಪ್ರತೀ ವರ್ಷ ಕಾರ್ಯಕ್ರಮದಲ್ಲಿ ದಿ| ಮನೋಹರಿ ಎನ್. ಶೆಟ್ಟಿ ಸ್ಮರಣಾರ್ಥ ವಿದ್ಯಾನಿಧಿ ಹಾಗೂ ಆರೋಗ್ಯ ನಿಧಿ ವಿತರಣೆಯು ನಡೆಯುತ್ತಿದ್ದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತಿದೆ. ಪ್ರಸಕ್ತ ವರ್ಷದ ಶಾರದೋತ್ಸವವು ಅ. 7 ಮತ್ತು 8ರಂದು ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಪದಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿ ಡಾ| ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಶ್ಚಂದ್ರ ಹೆಗ್ಡೆ, ಉಪಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ, ಜಯರಾಜ್ ಹೆಗ್ಡೆ ನಡಿಮಾರು, ಸಂದೀಪ್ ಎನ್. ಶೆಟ್ಟಿ, ಕೋಶಾಧಿಕಾರಿಯಾಗಿ ರವೀಂದ್ರ ಪಾಟ್ಕರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ.