Home ಧಾರ್ಮಿಕ ಸುದ್ದಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತರಿಂದ ಅಹೋರಾತ್ರಿ ಶಿವಸ್ಮರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತರಿಂದ ಅಹೋರಾತ್ರಿ ಶಿವಸ್ಮರಣೆ

1683
0
SHARE

ಬೆಳ್ತಂಗಡಿ : ಶಿವನಾಮಸ್ಮರಣೆ, ಭಜನೆ, ಅಹೋರಾತ್ರಿ ಓಂ ನಮಃ ಶಿವಾಯ ಪಂಚಾಕ್ಷರಿ ಪಠಣ ಧರ್ಮಸ್ಥಳ ಕ್ಷೇತ್ರ ಸುತ್ತ ಸೋಮವಾರ ಮಾರ್ದನಿಸಿತು. ಸಂಜೆ 6ರಿಂದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಅಭಿಷೇಕ, ಅರ್ಚನೆ, ನೈವೇದ್ಯ, ವಿಶೇಷ ಪೂಜೆಗಳೊಂದಿಗೆ ರಾತ್ರಿಯ ನಾಲ್ಕೂ ಜಾವಗಳಲ್ಲಿ ವಿಶೇಷ ಅಭಿಷೇಕಾಧಿ ಪೂಜೆಗಳು ಜರಗಿದವು.

ಮಹಾಪೂಜೆ ಬಳಿಕ ಉತ್ಸವ ಬಲಿ ಜರಗಿತು. ರಾತ್ರಿ 7.39ರ ಸುಮಾರಿಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ ಬಳಿಕ ಅಹೋರಾತ್ರಿ ಓಂಕಾರದ ಸ್ಮರಣೆ ಮಂಗಳವಾರದ ಸೂರ್ಯೋದಯದ ವರೆಗೆ ಜರಗಿತು.

ರಾತ್ರಿ ಸುಮಾರು 2ಕ್ಕೆ ಆರಂಭಗೊಂಡ ಶ್ರೀ ಮಂಜುನಾಥ ಸ್ವಾಮಿಯ ಬೆಳ್ಳಿ ಹಾಗೂ ಪತಾಕೆ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಭಜನೆ, ಸಂಕೀರ್ತನೆ, ಕೊಂಬು, ಕಹಳೆ, ವಾದ್ಯ, ಜಾಗಟೆಯೊಂದಿಗೆ ಕ್ಷೇತ್ರದ ಮಹಾದ್ವಾರ ತನಕ ರಥೋತ್ಸವ ಬಳಿಕ ಕಟ್ಟೆಪೂಜೆ ನಡೆದು ಮತ್ತೆ ಬೆಳ್ಳಿರಥದಲ್ಲೇ ದೇವರನ್ನು ಕುಳ್ಳಿರಿಸಿ ಕ್ಷೇತ್ರಕ್ಕೆ ಹಿಂದಿರುಗಲಾಯಿತು. ಬಳಿಕ ಪತಾಕೆ ರಥದಲ್ಲಿ ಉತ್ಸವ ಜರಗಿತು.

ಭಕ್ತಜನಸಾಗರ ಲಕ್ಷಾಂತರ ಭಕ್ತರು ಶಿವರಾತ್ರಿಯಲ್ಲಿ ಪಾಲ್ಗೊಂಡರು. ಪಾದಯಾತ್ರಿಗಳಿಗೆ ಕ್ಷೇತ್ರದಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇಗುಲದಿಂದ ಮುಖ್ಯದ್ವಾರದ
ವರೆಗೆ ವಿದ್ಯುದೀಪಾಲಂಕಾರ ಕಣ್ಮನ ಸೆಳೆಯುತ್ತಿತ್ತು. ಪರವೂರ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here