ಅಗಲ್ಪಾಡಿ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವವು ಆರಂಭಗೊಂಡಿದ್ದು ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾ.ಗಣೇಶ್ ಕಾರ್ಣಿಕ್ ಕ್ಷೇತ್ರಕ್ಕೆ ಭೇಟಿಯಿತ್ತರು. ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ಬರಮಾಡಿಕೊಂಡು ಶ್ರೀ ದೇವಿಯಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. ಬಿಜೆಪಿ ನೇತಾರರಾದ ಸುಧಾಮ ಗೋಸಾಡ, ಸದಾಶಿವ ರೈ, ಗಿರೀಶ್ ಆಗಲ್ಪಾಡಿ, ಶ್ರೀವತ್ಸ ಉಪ್ಪಂಗಳ, ಸಾಂಸ್ಕೃತಿಕ ಸಮಿತಿಯ ಪದಾ ಧಿಕಾರಿಗಳಾದ ರಾಮಚಂದ್ರ ಭಟ್ ಉಪ್ಪಂಗಳ, ರಾಜೇಶ್ ಮಾಸ್ಟರ್ ಅಗಲ್ಪಾಡಿ, ದುರ್ಗಾಫ್ರೆಂಡ್ಸ್ ಕ್ಲಬ್ ಸದಸ್ಯರು ಜೊತೆಗಿದ್ದರು.
ಇದೇ ಸಂದರ್ಭದಲ್ಲಿ ಬುಧವಾರ ನಿಧನರಾದ ಕುಂಞಿಕೃಷ್ಣ ಮಣಿಯಾಣಿ ಪದ್ಮಾರು ಅವರ ನಿವಾಸಕ್ಕೆ ತೆರಳಿ ಸಂತಾಪ ವ್ಯಕ್ತಪಡಿಸಿದರು.
ಉತ್ಸವದ ಪ್ರಯುಕ್ತ ಸ್ವರ್ಗೀಯ ಕೋಳಿಕ್ಕಜೆ ವಿಷ್ಣು ಭಟ್ ಸಂಸ್ಮರಣೆ ಸಂಗೀತಾರಾಧನೆ ಮುಳ್ಳೇರಿಯ ವಿದ್ಯಾಶ್ರೀ ಸಂಗೀತ ಸಭಾದ ವಿದ್ಯಾರ್ಥಿಗಳಿಂದ, ಧಾರ್ಮಿಕ ಸಭೆ, ಸೂರ್ಯನಾರಾಯಣ ಮಿತ್ತೂರು ಮತ್ತು ಬಳಗ ಪಾಲಕ್ಕಾಡ್ ಇವರಿಂದ ಸಾಂಪ್ರದಾಯಿಕ ಭಜನ್, ವೆಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನಾಟ್ಯ ವೈವಿಧ್ಯ, ಶ್ರೀ ಭೂತ ಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯಿತು. ಶನಿವಾರ ಬೆಳಗ್ಗೆ ಶ್ರೀ ಭೂತಬಲಿ, ಅವಭೃತ, ನೃತ್ತ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ.