Home ನಂಬಿಕೆ ಸುತ್ತಮುತ್ತ ಆದಿಮಾಯೆ-ಪ್ರಕೃತಿ-ಶಕ್ತಿಸ್ವರೂಪಿ

ಆದಿಮಾಯೆ-ಪ್ರಕೃತಿ-ಶಕ್ತಿಸ್ವರೂಪಿ

2409
0
SHARE

ಸೃಷ್ಟಿ, ಸ್ಥಿತಿ ಮತ್ತು ಲಯ ಇವು ಮೂರು ನಿರಂತರವಾದ ಕಾರ್ಯ. ಸಮಯದಿಂದ ಹಿಡಿದು ಜೀವಿ-ನಿರ್ಜೀವಿಯ ತನಕ ಪದೇಪದೇ ಸೃಷ್ಟಿಯಾಗುತ್ತಲೇ ಇರುತ್ತದೆ. ಸೃಷ್ಟಿಯಾದದ್ದು ಬೆಳೆಯುತ್ತದೆ, ಉಳಿಯುತ್ತದೆ ಮತ್ತು ಒಂದು ದಿನ ಅಳಿಯುತ್ತದೆ. ಅಂದರೆ ಲಯವಾಗುತ್ತದೆ. ಎಂಬಲ್ಲಿಗೆ ಈ ಮೂರು ಕಾರ್ಯಗಳು ನಿರಂತರವಾಗಿರುವ ಪ್ರಕ್ರಿಯೆಯೇ ಪ್ರಕೃತಿ. ಅದನ್ನು ವಿಶ್ವವೆನ್ನಿರಿ, ಜಗತ್ತು ಎನ್ನಿರಿ ಅಥವಾ ಸರಳವಾಗಿ ಬದುಕು ಅಂದರೂ ಆದೀತು. ಆದರೆ ಇವುಗಳು ನಿರಂತರವಾಗಿರದೇ ಇದ್ದಲ್ಲಿ ಅಂದು ಜಗತ್ತು ಸರ್ವನಾಶವಾಗುವುದು ಖಂಡಿತ. ಅದೂ ಒಂದು ಬಗೆಯ ಪ್ರಳಯವೇ. ಒಮ್ಮೆ ಊಹಿಸಿಕೊಳ್ಳಿ ಪ್ರಕೃತಿಯಲ್ಲಿನ ಯಾವುದೇ ಸಂಗತಿಗಳು ಬದಲಾಗದೇ ಹಾಗೇ ಉಳಿದು ಬಿಟ್ಟರೆ? ಸಣ್ಣ ಇರುವೆ, ಹುಳ, ಹಕ್ಕಿ, ಮೀನು, ಕಾಡುಪ್ರಾಣಿಗಳು, ಸಾಕುಪ್ರಾಣಿಗಳು, ಗಿಡ-ಮರ, ಹೂವು-ಹಣ್ಣು ಹಾಗೂ ಮನುಷ್ಯರೂ ಸಾಯುವುದೇ ಇಲ್ಲವೆಂದಾದರೆ ಪ್ರಪಂಚ ಹೇಗಿರಬಹುದು? ಅಬ್ಬಾ! ಊಹಿಸಿಕೊಂಡರೆ ಭಯವಾಗುತ್ತದೆ. ಹಾಗೇನಾದರೂ ನಡೆದಿದ್ದರೆ ಅದಾಗಲೇ ಪ್ರಳಯವಾಗಿ ಬಿಡುತ್ತಿತ್ತು. ಆದರೆ ಹಾಗಾಗುತ್ತಿಲ್ಲ! ಜಗತ್ತಿನಲ್ಲಿ ಹುಟ್ಟು-ಸಾವುಗಳು ಶಾಶ್ವತವಾಗಿವೆ. ಯಾವುದೋ ಶಕ್ತಿ ನಮ್ಮನ್ನು ಹುಟ್ಟಿಸುತ್ತಿದೆ, ಪಾಲಿಸುತ್ತಿದೆ ಮತ್ತು ಮುಕ್ತಿಯನ್ನೂ ನೀಡುತ್ತಿದೆ. ಇದರ ಹಿಂದೆ ವಿಜ್ಞಾನವನ್ನೂ ಮೀರಿದ ಶಕ್ತಿ ಕಾರ್ಯನಿರ್ವಸುತ್ತಿದೆ. ಅದಕ್ಕೆ ದೇವರು ಎಂಬ ಹೆಸರನ್ನು ಕೊಟ್ಟಿದ್ದೇವೆ. ಈ ಸೃಷ್ಟಿ, ಸ್ಥಿತಿ ಮತ್ತು ಲಯ ಇವುಗಳ ಮೂಲವೇ ಆದಿಮಾಯೆ; ಆದಿಮಾಯೆಯೇ ಪ್ರಕೃತಿ.

ದೇವಿಮಹಾತ್ಮೆಯಲ್ಲಿ ಪ್ರಪಂಚದ ಉದ್ಭವದ ಚಿತ್ರಣವನ್ನು ಸುಂದರವಾಗಿ ಹೇಳಲಾಗಿದೆ. ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ನಿರ್ವಹಿಸುವವರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಾದರೆ ಈ ಮೂವರನ್ನು ಸೃಷ್ಟಿಸಿದವಳೇ ಆದಿಮಾಯೆ. ಈ ತ್ರಿಮೂರ್ತಿಗಳ ತಾಯಿ ಇವಳು. ಈ ಮೂವರಿಗೂ ಅವರವರ ಕಾರ್ಯವನ್ನು ನಿರ್ಧರಿಸಿದವಳು ಇವಳೇ. ಇಡೀ ಜಗತ್ತನ್ನೇ ನಿಯಂತ್ರಿಸುವ ಶಕ್ತಿ ಅವಳದ್ದು. ದೇವೀಪುತ್ರರು ದೇವರಾದರು. ಆದಿ ಎಂದರೆ ಮೊದಲು ಎಂದರ್ಥ. ಮಾಯೆ ಎಂದರೆ ದೇವೀ ಎಂಬುದಾಗಿದೆ. ಅದೊಂದು ಮಹಾನ್ ಶಕ್ತಿ. ಪ್ರಪಂಚದ ಅಣು-ಅಣುವಿನ ಹುಟ್ಟಿಗೂ ಕಾರಣವಾಗುವ ಶಕ್ತಿ. ಮಹಿಷಾಸುರ, ಶುಂಬ-ನಿಶುಂಬ, ರಕ್ತಬೀಜಾಸುರನಂತಹ ದುಷ್ಟರನ್ನು ಕೊಂದ ಮಹಾನ್ ಶಕ್ತಿ; ಆದಿಮಾಯೆ.

ದೇವೀ ಸ್ವರೂಪವನ್ನು ನಾವು ಅನೇಕ ರೂಪಗಳಲ್ಲಿ ನೋಡಿದ್ದೇವೆ. ದುರ್ಗೆಯಾಗಿ, ಮಹಾಕಾಳಿಯಾಗಿ, ಮಹಿಷಮರ್ಧಿನಿಯಾಗಿ, ಅನ್ನಪೂರ್ಣೇಶ್ವರಿಯಾಗಿ, ಜ್ಞಾನದೇವತೆ ಶಾರದಾಂಬೆಯಾಗಿ, ಭುವನೇಶ್ವರಿಯಾಗಿ, ಚಾಮುಂಡೇಶ್ವರಿಯಾಗಿ, ಕಾತ್ಯಾಯಿನಿಯಾಗಿ, ಅಂಬಿಕೆಯಾಗಿ ಹೀಗೆ ಅನಂತರೂಪಗಳಲ್ಲಿ ಪೂಜಿಸುತ್ತೇವೆ; ಆರಾಧಿಸುತ್ತೇವೆ. ಇವು ದೇವ ಮತ್ತು ಮಾನವ ಸಂಬಂಧದ ನಿದರ್ಶನಗಳಾಗಿವೆ. ಅನಾದಿ ಕಾಲದಿಂದ ಬೆಳೆದುಬಂದ ಆಧ್ಯಾತ್ಮಿಕಬಂಧವೂ ಆಗಿದೆ. ಆತ್ಮಕ್ಕೆ ಮಾನವರೂಪ ಮಾತ್ರ. ಆದರೆ ಪರಮಾತ್ಮ ದೇವತಾ ಸ್ವರೂಪಿ. ಅದು ದೇವಿ ಇರಬಹುದು, ದೇವನಿರಬಹುದು ಅಥವಾ ಮುಕ್ಕೋಟಿ ದೇವತೆಗಳಿರಬಹುದು.

ಆದಿಮಾಯೆ ಎಂಬುದು ಕೇವಲ ಆಧ್ಯಾತ್ಮಿಕ ಸಂಗತಿಯ ಚಿತ್ರಣವಲ್ಲ. ಆದಿಮಾಯೆ ಎಂದರೆ ಪ್ರಕೃತಿ. ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಲಾಗಿದೆ. ಸ್ತ್ರೀ ಎಂಬುದು ಇಲ್ಲಿ ದೇವರ ರೂಪ. ಜಲದೇವತೆ, ಭೂದೇವತೆ, ಸಮುದ್ರದೇವತೆ, ವನದೇವತೆ ಮೊದಲಾದ ಹೆಸರಿನ ಮೂಲಕ ದೇವೀ ರೂಪದಲ್ಲಿಯೇ ಪ್ರಕೃತಿಯನ್ನು ನೋಡುತ್ತೇವೆ. ಪ್ರಕೃತಿ ಎಂದರೆ ಕೇವಲ ಗಿಡ-ಮರ-ಮಣ್ಣು-ಹಣ್ಣು-ಜೀವಿ-ನಿರ್ಜೀವಿ ಇಷ್ಟೇ ಅಲ್ಲ. ಅಲ್ಲೊಂದು ನಿರಂತರವಾದ ಚಲನೆ ಶಾಶ್ವತವಾಗಿರುತ್ತದೆ. ಸೂರ್ಯೋದಯವೂ ಸೇರಿದಂತೆ ಹಗಲು-ರಾತ್ರಿಗಳಲ್ಲಿನ ಎಲ್ಲ ಬಗೆಯ ಆಗು-ಹೋಗುಗಳ ಮಧ್ಯೆ ನಮಗರಿವಿಲ್ಲದ ವಿಸ್ಮಯ ನಡೆಯುತ್ತಲೇ ಇರುತ್ತದೆ. ಅದೇ ಶಕ್ತಿ. ಪ್ರಕೃತಿಯೆಂದರೆ ವಿಭಿನ್ನವಾದ ಶಕ್ತಿ. ಈ ಶಕ್ತಿಯಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ. ಈ ಶಕ್ತಿ ನಮ್ಮೆಲ್ಲರ ತಾಯಿಯೂ ಹೌದು. ಭೂಮಿ ಎಂಬುದು ಅವಳ ಮಡಿಲು. ಅದರಲ್ಲಿ ಆಡಿಕೊಂಡಿರುವ ಯಃಕಶ್ಚಿತ್ ಜಂತುಗಳು ನಾವು.

ಪ್ರಕೃತಿಯನ್ನಾಳುವ ಶಕ್ತಿಯನ್ನು ಹೀಗೂ ಅರಿತುಕೊಳ್ಳಬಹುದು. ದೀಪವೊಂದು ಉರಿಯುತ್ತಿದೆ ಎಂದರೆ ಅದರ ಹಿಂದೆಯೂ ಕಾಣದ ಶಕ್ತಿಯ ಕಾರ್ಯನಿರ್ವಹಿಸುತ್ತಿದೆ ಎಂದರ್ಥ. ಹಣತೆಯ ಗಾತ್ರ, ಬತ್ತಿಯ ಗಾತ್ರ, ಎಣ್ಣೆಯ ಅಳತೆ ಎಲ್ಲವೂ ಸರಿಯಾಗಿದ್ದು ದೊಡ್ಡದಾದ ದೀಪ ಉರಿಸಿದರೂ ಗಾಳಿಗೆ ಅದು ಆರಿಹೋಗಬಹುದು. ಗಾಳಿಯೇ ತಾಕದಂತೆ ಇರಿಸಿದಲ್ಲಿ ದೀಪ ಉರಿಯುವುದೇ ಇಲ್ಲ! ಆ ದೀಪವು ಆರದೆ ಹದವಾಗಿ ಉರಿಯುತ್ತಿದೆ ಎಂದಾದರೆ ಯಾವುದೋ ಕಾಣದ ಶಕ್ತಿ ಅದಕ್ಕೆ ಉರಿಯಲು ಅನುಕೂಲವಾಗುವಂತೆ ಪ್ರಕೃತಿಯನ್ನು ಹಿಡಿದಿಟ್ಟಿದೆ ಎಂದರ್ಥವಲ್ಲವೇ!

ಅಂತಹ ದೇವಿಯನ್ನು ಆರಾಧಿಸುವ ಮೂಲಕ ಬದುಕಿನ ಸತ್ಯವನ್ನು ಮತ್ತು ಜೀವನದ ತತ್ತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಆತ್ಮದ ಉನ್ನತಿಗಾಗಿಯೇ ಆಧ್ಯಾತ್ಮಚಿಂತನೆಗಳು ಹುಟ್ಟಿಕೊಂಡಿವೆ. ನಿಯಮವನ್ನು ಹೇಳಿದ ಮಾರ್ಗಗಳು ಅಥವಾ ನಿದರ್ಶನಗಳ ರೂಪಗಳು ವಿಭಿನ್ನವಾಗಿದ್ದರೂ ಕೂಡ ತತ್ತ್ವ ಒಂದೇ ಆಗಿದೆ. ನವರಾತ್ರೆ ಎಂಬ ಪರ್ವಕಾಲದಲ್ಲಿ ಶ್ರೀ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಿ, ಅದರ ಒಳಾರ್ಥವನ್ನು ಅರಿತು ಅಳವಡಿಸಿಕೊಳ್ಳಬೇಕು. ನಮ್ಮೊಳಗಿನ ರಾಕ್ಷಸೀತನವನ್ನು ದೂರವಿಡಲು ದೇವಿಯ ಮೊರೆ ಹೋಗಬೇಕು. ದೇವಿಯೇ ಮನದೊಳಗೆ ತುಂಬಿ, ಮನದ ಕಲ್ಮಷಗಳು ಹೊರಹೋಗಬೇಕು. ಎಲ್ಲರೂ ಎಲ್ಲರೊಳು ಒಂದಾಗಬೇಕು. ಮಾನವನು ದೇವರಾಗಬೇಕು.

ಮುಂದುವರಿಯುವುದು……

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||

ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here