ಕಲ್ಲುಗುಡ್ಡೆ : ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು.
ಪೂರ್ವಾಹ್ನ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ನಡೆದು ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ದೈವಗಳಿಗೆ ಹಾಗೂ ನಾಗದೇವರಿಗೆ ತಂಬಿಲ ಸೇವೆ ನಡೆಯಿತು.
ರಾತ್ರಿ ಮಹಾಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಬೆಡಿ ಪ್ರದರ್ಶನ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆಯಿತು.
ಕ್ಷೇತ್ರದ ಅರ್ಚಕರಾದ ನಾರಾಯಣ ಅಭ್ಯಂಕರ್ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಬಳಿಕ ಅಡೆಂಜ ಶಿವಗಣೇಶ್ ಪ್ರಾಯೋಜಕತ್ವದಲ್ಲಿ ಚಿರು ಮೆಲೋಡಿಸ್ ಕಲ್ಲುಗುಡ್ಡೆ ಅರ್ಪಿಸುವ ಅರವಿಂದ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ, ಡಾನ್ಸ್, ಕಾಮಿಡಿ ಶೋ, ಮಿಮಿಕ್ರಿ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಆನುವಂಶಿಕ ಮೋಕ್ತೇಸರರಾದ ಎಸ್. ಸಂಜೀವ ಗೌಡ ಅಡೆಂಜ, ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಗೌಡ ಬಳ್ಳೇರಿ, ಅಡೆಂಜ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಗೌಡ ಈಚಿಲಡ್ಕ, ಭಜನ ಮಂಡಳಿ ಅಧ್ಯಕ್ಷ ಪದ್ಮನಾಭ ಗೌಡ ಕೆರ್ನಡ್ಕ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಸಹಿತ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.