Home ಧಾರ್ಮಿಕ ಸುದ್ದಿ ಅದಮಾರು ಮಠ ಪರ್ಯಾಯದ ವೈಭವದ ಅಕ್ಕಿ ಮುಹೂರ್ತ

ಅದಮಾರು ಮಠ ಪರ್ಯಾಯದ ವೈಭವದ ಅಕ್ಕಿ ಮುಹೂರ್ತ

211
0
SHARE

ಉಡುಪಿ: ಶ್ರೀಕೃಷ್ಣಮಠದಲ್ಲಿ ನಡೆಯುವ ಎರಡು ವರ್ಷಗಳ ಪರ್ಯಾಯ ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಎರಡನೆಯ ಮುಹೂರ್ತವಾದ ಅಕ್ಕಿ ಮುಹೂರ್ತ ಬುಧವಾರ ಶ್ರೀಅದಮಾರು ಮಠದಲ್ಲಿ ಸಂಪನ್ನಗೊಂಡಿತು.

ಮೊದಲು ಶ್ರೀಅದಮಾರು ಮಠದಲ್ಲಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನವಗ್ರಹ ಪೂಜೆ, ಪ್ರಾರ್ಥನೆ ಸಲ್ಲಿಸಿ ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ, ಕೃಷ್ಣಮುಖ್ಯಪ್ರಾಣ, ಸುಬ್ರಹ್ಮಣ್ಯ ದೇವರಲ್ಲಿ, ಪೂರ್ವ ಸ್ವಾಮೀಜಿಯವರ ವೃಂದಾವನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೋವುಗಳಿಗೆ ಗೋಗ್ರಾಸ ನೀಡಿದರು. ಅದಮಾರು ಮಠದಲ್ಲಿ ಅಕ್ಕಿ ಮುಡಿಗಳಿಗೆ ಪೂಜೆ ಸಲ್ಲಿಸಿ ರಥಬೀದಿಯಲ್ಲಿ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ಬಂದು ಅದಮಾರು ಮಠದ ಗರ್ಭಗುಡಿ ಹೊರಗೆ ಇರಿಸಿ ಅಕ್ಕಿ ಮುಹೂರ್ತ ನಡೆಸಲಾಯಿತು. ಇದೇ ಸಂದರ್ಭ ಪವಮಾನ ಸೂಕ್ತ, ಪುರುಷ- ಶ್ರೀಸೂಕ್ತಾದಿ ಪಾರಾಯಣವನ್ನು ವೈದಿಕರು ನಡೆಸಿದರು. ಅಷ್ಟಮಠದ ಪ್ರತಿನಿಧಿಗಳಿಗೆ ನವಗ್ರಹ ದಾನಗಳನ್ನು ನೀಡಲಾಯಿತು.

ಪರ್ಯಾಯ ಶ್ರೀ ಪಲಿಮಾರು, ಶ್ರೀ ಪೇಜಾವರ ಮಠದ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಕಾಣಿಯೂರು, ಶ್ರೀ ಸೋದೆ ಮಠಾಧೀಶರಿಗೆ ಅದಮಾರು ಮಠದಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮಠದ ಪುರೋಹಿತ ವೇ|ಮೂ| ಶಿಬಿರೂರು ವಾಸುದೇವ ಆಚಾರ್ಯ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಗೋವಿಂದರಾಜ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿಯ ಬಹುತೇಕ ಎಲ್ಲ ಮಠಗಳಲ್ಲಿರುವ ಹೊರಗಿನ ಕಲ್ಲಿನ ದ್ವಾರ ಚಿಕ್ಕದಿದೆ. 1964ರಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಅವರು ಉಡುಪಿಯ ಮೊದಲ ಆಧುನಿಕ ಛತ್ರವಾದ ಅದಮಾರು ಮಠದ ಅತಿಥಿಗೃಹಕ್ಕೆ ಶಿಲಾನ್ಯಾಸ ನೆರವೇರಿಸಲು ಬಂದಾಗ ಆಜಾನುಬಾಹು ವ್ಯಕ್ತಿತ್ವದ ಒಡೆಯರ್‌ ಅವರಿಗೆ ಒಳಪ್ರವೇಶಿಸಲು ಅದಮಾರು ಮಠದ ಕಲ್ಲಿನ ದ್ವಾರ ಕಿರಿದಾಯಿತು. ಆಗ ಶ್ರೀವಿಬುಧೇಶತೀರ್ಥರು ಕಲ್ಲಿನ ದ್ವಾರವನ್ನು ಅಗಲಗೊಳಿಸಿದರು. ಈ ಘಟನೆ ಮತ್ತು ಅಗಲಗೊಂಡ ದ್ವಾರವನ್ನು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಬುಧವಾರ ವಿವರಿಸಿದರು. ಈಗಲೂ ಈ ದ್ವಾರ ಅಗಲಗೊಂಡೇ ಇದೆ.

ದೇಸೀ ತಳಿ ಅಕ್ಕಿಗೆ ಪೂಜೆ
16 ಬಗೆಯ ಸಾವಯವ/ ದೇಸೀ ತಳಿಗಳ ಅಕ್ಕಿಯ ಮುಡಿಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಒಟ್ಟು 18 ಮುಡಿ ಅಕ್ಕಿಯನ್ನು ಸಾಂಕೇತಿಕವಾಗಿ ಮೆರವಣಿಗೆ ನಡೆಸಿದ ಬಳಿಕ ಪೂಜಿಸಲಾಯಿತು.

LEAVE A REPLY

Please enter your comment!
Please enter your name here