Home ಧಾರ್ಮಿಕ ಸುದ್ದಿ ಅಬ್ಬಿ ಬೀರ ದೈವಸ್ಥಾನದ ಪವಾಡ; ಗಾಳಿ ನಿಯಂತ್ರಿಸುವ ದೇವರು, ದೇವರಿಗೆ ಪೂಜೆ ಸಲ್ಲಿಸದಿದ್ದರೆ ಹುಲಿ ಬರುತ್ತದೆ!

ಅಬ್ಬಿ ಬೀರ ದೈವಸ್ಥಾನದ ಪವಾಡ; ಗಾಳಿ ನಿಯಂತ್ರಿಸುವ ದೇವರು, ದೇವರಿಗೆ ಪೂಜೆ ಸಲ್ಲಿಸದಿದ್ದರೆ ಹುಲಿ ಬರುತ್ತದೆ!

2233
0
SHARE

ಬೈಂದೂರು: ವಿಜ್ಞಾನ, ತಾಂತ್ರಿಕತೆ ಆಧುನಿಕ ಜಗತ್ತಿನಲ್ಲಿ ನಾಗಾಲೋಟದಲ್ಲಿದ್ದರೂ ಇಂದಿಗೂ ಅಗೋಚರ ಸಂಗತಿಗಳು, ಪವಾಡಗಳಿಗೇನೂ ಕಡಿಮೆಯಿಲ್ಲ. ದೈವಶಕ್ತಿಯೇ ಕಾರಣ ಎನ್ನಲಾಗುವ ಪರಿಣಾಮಗಳಿಗೆ ಇಂದಿಗೂ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಅಬ್ಬಿಬೀರ ದೈವಸ್ಥಾನ ಸಾಕ್ಷಿಯಾಗಿ ನಿಂತಿದೆ. ದಟ್ಟಾರಣ್ಯದಲ್ಲಿರುವ ಇಲ್ಲಿದ ದೇವರ ಮೂರ್ತಿಗೆ ವಾರ್ಷಿಕ ಪೂಜೆಯಲ್ಲಿ ವ್ಯತ್ಯವಾದರೆ ಈ ಊರಿಗೆ ಹುಲಿ ಬರುತ್ತದಂತೆ, ಅದರ ಕೂಗು ಕೇಳಿಸುತ್ತಂತೆ!

ಅಗೋಚರ ಶಕ್ತಿ
ಕುಂದಾಪುರದ ತೂದಳ್ಳಿಯಿಂದ ಸುಮಾರು 10-15 ಕಿ.ಮೀ ಕೂಸಳ್ಳಿ ಜಲಪಾತ ಕಾಣ ಸಿಗುತ್ತದೆ. ಇದರಿಂದ ಮುಂದೆ ಹರಿವ ಕೂಸಳ್ಳಿ ಹೊಳೆ ದಂಡೆಯಲ್ಲೇ ಅಬ್ಬಿ ಬೀರ ದೈವಸ್ಥಾನವಿದೆ. ಸಂಕ್ರಾಂತಿಯಂದು ಊರಿನವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಹೊಳೆ ದಂಡೆಯ ಮೇಲೆ ದೈವದ ಮೂರ್ತಿ, ಮರದ ಕುದುರೆ, ಪೂಜಾ ಸಾಮಗ್ರಿಗಳು ಇಲ್ಲಿವೆ. ಮಳೆಗಾಲದಲ್ಲಿ ಕೂಸಳ್ಳಿ ಹೊಳೆ ತುಂಬಿ ಹರಿದು ರಾದ್ಧಾಂತವಾದರೂ, ಈ ದೈವಸ್ಥಾನದ ದಂಡೆಯಲ್ಲಿರುವ ವಸ್ತುಗಳಿಗೆ ಏನೂ ಹಾನಿಯಾಗುವುದಿಲ್ಲ. ಇನ್ನು ಪ್ರತಿ ಸಂಕ್ರಾಂತಿಗೆ ದೇವರ ಧ್ವಜ ಸ್ತಂಭವನ್ನು ಊರಿನವರು ಸಮರ್ಪಿಸುತ್ತಾರೆ.

ಗಾಳಿ ನಿಯಂತ್ರಿಸುವ ದೇವರು!
ಅಬ್ಬಿ ಬೀರ ಸ್ಥಾನವನ್ನು ಗಾಳಿ ದೇವರ ಮನೆಯೆಂದೂ ಕರೆಯುತ್ತಾರೆ. ಕಾರಣ ಇಲ್ಲಿ ಸಾಮಾನ್ಯವಾಗಿ ನವೆಂಬರ್‌ -ಡಿಸೆಂಬರ್‌ವರೆಗೆ ವಿಪರೀತ ಗಾಳಿ. ಈ ಸಂದರ್ಭ ಊರಿನವರು ಹರಕೆ ಹೊತ್ತು ಪ್ರಾರ್ಥನೆ ಸಲ್ಲಿಸುತ್ತಾರೆ. ಆಗ ಗಾಳಿ ರಭಸ ನಿಲ್ಲುತ್ತದೆ. ಇನ್ನು ಭತ್ತದ ಕೃಷಿ ಸಂದರ್ಭ ಹೊಟ್ಟು ಬೇರ್ಪಡಿಸಲೂ ಪ್ರಾರ್ಥಿಸುತ್ತಾರೆ. ಅಬ್ಬಿ ದೇವರ ಬಳಿ ತರಗೆಲೆ ಹಿಡಿದು ಹಾರಿ ಬಿಟ್ಟಾಕ್ಷಣ ಗಾಳಿ ಬೀಸಲು ಪ್ರಾರಂಭವಾಗುತ್ತದೆ ಎಂದು ಸ್ಥಳೀಯರಾದ ಅತ್ತಿಕೇರಿ ಸುಬ್ಬ ಪೂಜಾರಿ ಹೇಳುತ್ತಾರೆ.

ವಿಶಿಷ್ಟ ಸಂಪ್ರದಾಯಗಳು
ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಎಲ್ಲರೂ ಉಪ್ಪು ರಹಿತ ಫ‌ಲಾಹಾರ ಸಿದ್ಧಪಡಿಸಿ ತಿನ್ನುತ್ತಾರೆ. ಕಾರಣ ಹಿಂದೊಬ್ಬರು ಇದಕ್ಕೆ ಉಪ್ಪು ಸೇರಿಸಿದ್ದರಿಂದ ಅವರನ್ನು ಹುಲಿ ಎಳೆದುಕೊಂಡು ಹೋಗಿತ್ತು ಎನ್ನುವ ಕಥೆ. ಜೈನ ವಂಶಸ್ಥರು ಇಲ್ಲಿ ಪೂಜೆ ಹೊಣೆ ಹೊತ್ತುಕೊಂಡಿದ್ದು, ಪ್ರತಿ ಮನೆಯಿಂದ ಪೂಜೆಗೆ ತೆಂಗಿನಕಾಯಿ ನೀಡದಿದ್ದರೂ ಊರಿಗೆ ಹುಲಿ ಆಗಮಿಸುತ್ತದಂತೆ. ಕೆಲ ವರ್ಷದಿಂದ ಹುಲಿ ಕಾಣಿಸದಿದ್ದರೂ ಹುಲಿ ಘರ್ಜನೆ ಕೇಳುತ್ತದೆ ಎನ್ನುವುದು ಕೃಷಿಕರಾದ ಕುಪ್ಪ ಮರಾಠಿ ಹೇಳುತ್ತಾರೆ. ವಿಚಿತ್ರ ಸಂಪ್ರದಾಯ, ಪವಾಡಗಳ ಈ ದೈವಸ್ಥಾನ ಇನ್ನೂ ಅಭಿವೃದ್ಧಿ ಕಂಡಿಲ್ಲ.

ಅರುಣ ಕುಮಾರ್‌ ಶಿರೂರು

LEAVE A REPLY

Please enter your comment!
Please enter your name here