Home ನಂಬಿಕೆ ಸುತ್ತಮುತ್ತ ದೇವರಿಗೆ ಆರತಿ ಮಾಡುವ ಉದ್ದೇಶವಾದರೂ ಏನು?

ದೇವರಿಗೆ ಆರತಿ ಮಾಡುವ ಉದ್ದೇಶವಾದರೂ ಏನು?

3861
0
SHARE

ಇಂದು ಯಾವುದೇ ದೇವಾಲಯಕ್ಕೆ ಹೋದರೂ ಸೇವಾವಿವರಗಳ ಪಟ್ಟಿಯನ್ನು ನೋಡಿದಾಗ ಅಲ್ಲಿ ಆರತಿ ಸೇವೆ ಅಥವಾ ಮಂಗಳಾರತಿ ಸೇವೆ ಎಂದು ಬರೆದಿರುವುದನ್ನು ಕಾಣುತ್ತೇವೆ. ಹಾಗಾದರೆ ಕೇವಲ ಒಂದು ಸೇವೆ ಎನಿಸಿಕೊಂಡಿರುವ ಆರತಿ ಸೇವೆಯ ಹಿಂದಿರುವ ಅರ್ಥವಾದರೂ ಏನು? ಎಂಬ ಕುತೂಹಲ ಹಲವಲ್ಲಿರಬಹುದು.

ದೇವಾಲಯಗಳಲ್ಲಿ ನಿಗದಿತವಾದ ಹಣಕೊಟ್ಟು ಅದರ ರಸೀದಿಯನ್ನು ಅರ್ಚಕರಿಗೆ ಕೊಟ್ಟರೆ ಕ್ಷಣಾರ್ಧದಲ್ಲಿ ಕರ್ಪೂರವನ್ನೋ ಎಣ್ಣೆಯಲ್ಲಿ ಮುಳುಗಿಸಿದ ಹತ್ತಿಯ ಬತ್ತಿಯನ್ನೋ ಆರತಿ ತಟ್ಟೆಯಲ್ಲಿಟ್ಟು ಅದನ್ನು ದೀಪದಿಂದ ಉರಿಸಿ ದೇವರ ಮೂರ್ತಿಗೆ ಅಡಿಯಿಂದ ಮುಡಿಯವರೆಗೂ ಅಡ್ಡಕ್ಕೂ ಉದ್ದಕ್ಕೂ ಮಂತ್ರೋಚ್ಛಾರಣೆಯ ಜೊತೆಗೆ ಎತ್ತಿ-ಸುತ್ತಿ ನಂತರ ನಿಮಗೆ ಆ ಆರತಿಯನ್ನು ಸ್ವೀಕರಿಸಲು ನೀಡುತ್ತಾರೆ.  ಇದೇ ಮಂಗಳಾರತಿ ಅಥವಾ ಆರತಿ ಸೇವೆ. ಇದರಲ್ಲಿ ಒಳಾರ್ಥವಾದರೂ ಏನಿದೆ? ಅದೊಂದು ಭಕ್ತಿಪೂರ್ವಕವಾಗಿ ಮಾಡುವ ಸೇವೆ ಅಷ್ಟೆ ಎಂಬುದನ್ನು ಎಲ್ಲರೂ ತಿಳಿದುಕೊಂಡಿರುತ್ತಾರೆ.

ಆದರೆ ಅದರ ನಿಜವಾದ ಅರ್ಥ ದೇವರನ್ನು ಕಾಣುವುದು. ಭಕ್ತಿಯ ಕಣ್ಣಿಂದಲೂ ಏಕದೃಷ್ಟಿಯಿಂದಲೂ ಏಕಾಗ್ರತೆಯಿಂದಲೂ ಕಾಣುವ ಬಗೆಯೇ ಈ ಆರತಿ ಹಿಂದಿರುವ ಮಹತ್ವ. ಹಿಂದೆ ಎಲ್ಲಾ ದೇವಾಲಯಗಳಲ್ಲೂ ಗರ್ಭಗುಡಿಯು ಭಕ್ತರು ನಿಲ್ಲುವ ಸ್ಥಳದಿಂದ ಬಹುದೂರದಲ್ಲೇ ಇರುತ್ತಿದ್ದುವು. ಮತ್ತು ಅದು ಕತ್ತಲಿಂದ ಕೂಡಿದ್ದು ಈಗಿನಂತೆ ವಿದ್ಯುದ್ದೀಪವನ್ನು ಗರ್ಭಗುಡಿಗಳಲ್ಲಿ ಉರಿಸುತ್ತಿರಲಿಲ್ಲ. ಸಣ್ಣದಾದ ದೀಪವೊಂದು ಸದಾ ಉರಿಯುತ್ತಿತ್ತು. ಆದರೆ ಆ ದೀಪದ ಬೆಳಕಿನಲ್ಲಿ ದೇವರ ಮುರ್ತಿಯ ದರ್ಶನವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ದೇವರ ಮೂರ್ತಿಯನ್ನು ನೋಡುವ ಸಲುವಾಗಿಯೇ ಈ ಆರತಿ ಎಂಬುದು ಹುಟ್ಟಿಕೊಂಡಿತು.

ಈ ಆರತಿಯನ್ನು ಮಾಡುವಾಗ ದೇವರ ಮೂರ್ತಿ ಸಂಪೂರ್ಣವಾಗಿ ಕಾಣುವಂತೆ ದೇವರ ಮುಖ, ಕಂಠ, ಬಲಕೈ, ಎದೆ ಮತ್ತು ಹೊಟ್ಟೆಯ ಭಾಗ, ಎಡಕೈ, ಕಾಲುಗಳು ಮತ್ತು ಪಾದಗಳು ಸ್ಪಷ್ಟವಾಗಿ ಕಾಣುವಂತೆ ಅಲ್ಲಲ್ಲಿ ಆರತಿಯ ಬೆಳಕನ್ನು ಹಿಡಿದು ತೋರಿಸುತ್ತಾರೆ. ಇದು ಆರತಿಯ ಕ್ರಮ ಹಾಗೂ ಅದರ ಉದ್ದೇಶ. ಮೊದಮೊದಲು ದೇವರ ಮೂರ್ತಿಯನ್ನು ನೋಡ ಬಯಸುವ ಹಲವು ಜನರ ಸೇರಿದನಂತರವೇ ಆರತಿಯನ್ನು ಮಾಡುವ ಕ್ರಮವಿತ್ತು. ಆದರೆ ಇಂದು ಹಾಗಿಲ್ಲ ಅದರ ಮೂಲ ಉದ್ದೇಶ ಮರೆಯಾಗಿ ವಿದ್ಯುದ್ದೀಪವಿದ್ದರೂ ಪ್ರತಿಯೊಬ್ಬನಿಗೂ ಒಂದೊಂದು ಸಲ ಆರತಿ ಮಾಡುವುದು  ಸೇವೆಯೆಂದು ಪರಿಗಣಿಸಲ್ಪಟ್ಟಿದೆ.

ಬೆಳಕಿನ ಹೊಳಪು: ಉದ್ದೇಶ ಏನೇ ಇರಲಿ, ಭಕ್ತಿ ನಿಮ್ಮ ಸಂಸ್ಕೃತಿಯ ಶಕ್ತಿಯಾಗಿದ್ದಾಗ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಹಾರೈಕೆ ಫಲದಾಯಕವಾಗುವುದಂತು ನಿಜ.

 –ವಿಷ್ಣು ಭಟ್ಟ ಹೊಸ್ಮನೆ.

 

LEAVE A REPLY

Please enter your comment!
Please enter your name here