Home ಧಾರ್ಮಿಕ ಕ್ಷೇತ್ರಗಳು 450 ವರ್ಷದ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ ಚರ್ಚ್ ವಿಶೇಷತೆ ಏನು…

450 ವರ್ಷದ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ ಚರ್ಚ್ ವಿಶೇಷತೆ ಏನು…

3757
0
SHARE

ಎಲ್ಲವನ್ನೂ ತೊರೆದ ಸಂತನಿಗೆ ಹಾಗೂ ದುಡಿಮೆಯನ್ನೇ ನೆಚ್ಚಿದ ಬಡವನಿಗೆ ದೇವರು ಬೇಗ ಒಲಿಯುತ್ತಾರೇನೋ. ಈ ಮಾತಿಗೆ ನಮ್ಮ ಎಲ್ಲ ಧರ್ಮ, ಪುರಾಣ, ಜನಪದ ಕಥನಗಳಲ್ಲಿ ಆಗಾಗ ಸಾಕ್ಷ್ಯಗಳು ದೊರಕುತ್ತಲೇ ಇರುತ್ತವೆ. ದಕ್ಷಿಣ ಕನ್ನಡದ ಕಡಲ ತಡಿಯ ನಗರ ಮಂಗಳೂರು. ಇಲ್ಲಿನ ಬೋಳಾರ ಎಂಬಲ್ಲಿರುವ ರೊಸಾರಿಯೋ ಕೆಥೆಡ್ರಲ್ ಗೆ ಕೂಡ ಇಂಥದ್ದೇ ಒಂದು ಹಿನ್ನೆಲೆಯಿದೆ.

ಸುಮಾರು 1568ರಲ್ಲಿ ಪೋರ್ಚುಗೀಸರು ಸ್ಥಾಪಿಸಿದ ಚರ್ಚ್ ಇದು. ಕರ್ನಾಟಕದ ದಕ್ಷಿಣ ಕರಾವಳಿ ಜನರ ನೆಚ್ಚಿನ ರೋಸರಿ ಮಾತೆಯ ಈ ದೇಗುಲ,’ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್’.

ನಮಗೆ ದೊರೆತ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದರೆ 2018ಕ್ಕೆ ಈ ದೇಗುಲಕ್ಕೆ 450 ವರ್ಷಗಳು ತುಂಬಿವೆ. ಆದರೆ ಜನಶ್ರುತಿ ಮತ್ತಿತರ ಐತಿಹ್ಯಗಳನ್ನು ನಂಬುವುದಾದರೆ ಈ ಚರ್ಚಿನ ಮೂಲ ದೇಗುಲಕ್ಕೆ ಅದಕ್ಕಿಂತ ಹೆಚ್ಚು ವರ್ಷಗಳಾಗಿರಬಹುದು.

ಪೋರ್ಚುಗೀಸರ ಆಗಮನಕ್ಕೂ ಮುಂಚೆ, ಡೊಮಿನಿಕಲ್ ಸಭೆ (ಡೊಮಿನಿಕ್ ಪಂಥ) ಯ ಫಾದರ್ ಜೋರ್ದುನುಸ್ಸ ಎಂಬಾತ ಕಡಲತಡಿಯಲ್ಲಿ ಕ್ರೈಸ್ತ ಧರ್ಮ ವಿಸ್ತರಣೆಗೆ ದುಡಿಯುತ್ತಿದ್ದರು. ಹಾಗಾಗಿ ಇಲ್ಲೊಂದು ಚರ್ಚ್ ಇದ್ದಿರಬಹುದು. ಅದು ಬೋಳಾರಕ್ಕಿಂತಲೂ ಸ್ವಲ್ಪ ಮುಂದೆ ಕಡಲಿಗೆ ಇನ್ನೂ ಹತ್ತಿರದಲ್ಲಿರುವ ಬೆಂಗರೆ ಎಂಬಲ್ಲಿತ್ತು.

ಅದು ಫಲ್ಗುಣಿ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನ. ಪೋರ್ಚುಗೀಸರು ಮಂಗಳೂರಿಗೆ ಬಂದಾಗ, ಬೆಂಗರೆಯ ಪಾಳೆಯಗಾರನು ತನಗೆ ಸಮುದ್ರದಲ್ಲಿ ದೊರೆತ ಶಿಲುಬೆಯೊಂದನ್ನು ಅವರಿಗೆ ಕೊಟ್ಟನೆಂದೂ ಪ್ರತೀತಿಯಿದೆ. ಆ ಶಿಲುವೆ ಬೆಂಗರೆ ದೇಗುಲದಲ್ಲೇ ಇತ್ತು. ಪೋರ್ಚುಗೀಸರೊಂದಿಗೆ ವ್ಯಾಪಾರದ ಜಿದ್ದಾಜಿದ್ದಿ ಹೊಂದಿದ್ದ ಅರಬರು ಪೋರ್ಚುಗೀಸರ ಬೆಂಗರೆ ಕೋಟೆಯನ್ನು ನಾಶಮಾಡಿದಾಗ ಆ ಚರ್ಚ್ ಕೂಡ ನಾಶವಾಯಿತು. (ಮಾಹಿತಿ : ಹಿಲರಿ ಕ್ರಾಸ್ತಾ, ಉದಯವಾಣಿ: ಫೆಬ್ರವರಿ 28,2014).

ಬಳಿಕ 1568ರಲ್ಲಿ ಪೋರ್ಚುಗೀಸರು ಬೋಳಾರದಲ್ಲಿ ಹೊಸ ದೇವಾಲಯ ನಿರ್ಮಾಣ ಮಾಡಿದರು. ಆ ಸಂದರ್ಭದಲ್ಲಿ ಬೆಸ್ತರಿಗೆ ಮೇರಿ ಮಾತೆಯ ಮೂರ್ತಿಯೊಂದು ಬಲೆಯಲ್ಲಿ ಸಿಕ್ಕಿತಂತೆ. ಆ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಜನಜನಿತ ಕಥನಗಳು ಈ ಮೂರ್ತಿಯೇ ಪೋರ್ಚುಗೀಸರ ಕಾರ್ಖಾನೆಗಳಿಗೆ ಸೇರಿದ ಚರ್ಚ್ ಎಂದು ದಾಖಲೆಗಳು ಹೇಳುತ್ತವೆ. ಆ ಕಾಲದಲ್ಲಿ ಈ ಚರ್ಚ್ ಉನ್ನತ ಕುಲದ ಮಂಗಳೂರಿಗರ ನೆಚ್ಚಿನ ಪ್ರಾರ್ಥನಾ ಸ್ಥಳವಾಗಿತ್ತು ಎಂದು ದಾಖಲಿಸುತ್ತಾನೆ ಇಟೆಲಿಯ ಯಾತ್ರಿಕ ಪಿಯೆತ್ರೊ ದಲಾವಲೆ.

1784ರ ಸುಮಾರಿಗೆ ಟಿಪ್ಪು ಸುಲ್ತಾನನ ಸೈನ್ಯ ದಕ್ಷಿಣ ಕರ್ನಾಟಕದ ಚರ್ಚ್ ಗಳನ್ನು ಪುಡಿಗಟ್ಟಿದ್ದನ್ನು ಇತಿಹಾಸ ದಾಖಲಿಸಿದೆ. ಆ ಸಂದರ್ಭದಲ್ಲಿ ಜೆಸುಯಿಟ್ (ರೋಮನ್ ಕೆಥೊಲಿಕ್ ಕ್ರೈಸ್ತ ಪಂಥ) ಫಾದರ್ ಗಳು, ಈ ರೊಸಾರಿಯೋ ದೇಗುಲದಲ್ಲಿದ್ದ ಮೇರಿ ಮಾತೆಯ ವಿಗ್ರಹವನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಸುಪ್ರಸಿದ್ದ ಸಂತ ಅಲೋಸಿಯಸ್ ಕಾಲೇಜಿನ ಸಂಗ್ರಹಾಲಯದಲ್ಲಿ ಅಡಗಿಸಿಟ್ಟರಂತೆ. ಬಳಿಕ ಆ ವಿಗ್ರಹವನ್ನು ಅಲ್ಲಿಂದ ತಂದಿಲ್ಲ, ಹಾಗಾಗಿ ಮೂಲ ವಿಗ್ರಹ ಇನ್ನೂ ಅಲ್ಲಿಯೇ ಇರಬಹುದು ಎನ್ನುತ್ತಾರೆ ಕೆಢೆಡ್ರಲ್ ನಲ್ಲಿ ಇರುವ ಫಾದರ್ ಜೆ.ಬಿ.ಕ್ರಾಸ್ತಾ ಅವರು.

ಅನಂತರ 1813ರಲ್ಲಿ ಚರ್ಚ್ ನ್ನು ಅದೇ ಸ್ಥಳದಲ್ಲಿ ಮರುನಿರ್ಮಾಣ ಮಾಡಲಾಯಿತು. 1851ರಲ್ಲಿ ಈ ಚರ್ಚ್ ಕೆಥೆಡ್ರಲ್ ಆಗಿ ಘೋಷಿಸಲ್ಪಟ್ಟಿತು. ಅಲ್ಲಿಂದ ಸುಮಾರು 60 ವರ್ಷಗಳ ಬಳಿಕ ಹಳೆಯ ಚರ್ಚ್ ನ್ನು ಸಂಪೂರ್ಣವಾಗಿ ಕೆಡವಿ ಸುಂದರ, ಸುವಿಶಾಲವಾಗಿ ಮತ್ತೊಮ್ಮೆ ರೂಪಿಸಲಾಯಿತು. ಹೀಗೆ 1910 ರಲ್ಲಿ ಜೆಸುಯೆಟ್ ಫಾದರ್ ಹೆನ್ರಿ ಬಝೂನಿ ಅವರ ನೇತೃತ್ವದಲ್ಲಿ ಚರ್ಚ್ ಸುಂದರಗೊಂಡಿತು. ವ್ಯಾಟಿಕನ್ ನಗರದಲ್ಲಿರುವ ಸೈಂಟ್ ಪೀಟರ್ಸ್ ಬೆಸಿಲಿಕಾದ ಗುಮ್ಮಟವನ್ನೇ ಹೋಲುವ ಸುಂದರ ಗುಮ್ಮಟವನ್ನು ರೊಸಾರಿಯೋ ಚರ್ಚ್ ಕೂಡ ಹೊಂದಿದೆ. ಜತೆಗೆ ಹಲವು ಕಮಾನುಗಳಿಂದ ಕೂಡಿದ ಸುಂದರ ವಾಸ್ತು ವಿನ್ಯಾಸವನ್ನು ಹೊಂದಿದೆ.

ಚರ್ಚಿನ ಎತ್ತರದ ಗುಮ್ಮಟ ಹಾಗೂ ಅದರ ಮೇಲಿರುವ ಶಿಲುಬೆ, ಹಿಂದಿನ ಕಾಲದಲ್ಲಿ ಕಡಲಿನಿಂದ ಹಿಂತಿರುಗುವ ನಾವಿಕರಿಗೆ ದೀಪಸ್ತಂಭವಾಗಿಯೂ ಸಹಾಯ ಮಾಡುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ಪೋರ್ಚುಗೀಸ್ ಲಾಂಛನಗಳನ್ನು ಈಗಲೂ ರೋಸಾರಿಯೋದಲ್ಲಿ ಕಾಣಬಹುದು.

1915 ರಲ್ಲಿ ಔಪಚಾರಿಕವಾಗಿ ಈ ದೇಗುಲವನ್ನು ಮತ್ತೊಮ್ಮೆ ತೆರೆಯಲಾಯಿತು. ಅಂದಿನಿಂದ ಮೊದಲ್ಗೊಂಡು ಈಗಲೂ ‘ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್’ ಭಕ್ತರಿಗೆ ಅಭಯ ನೀಡುತ್ತಿದೆ. ಈಗ ಇದು ಮಂಗಳೂರು ಧರ್ಮಪ್ರಾಂತ್ಯದ ಮಹಾದೇವಾಲಯ ಅಂದರೆ ರೋಸಾರಿಯೋ ಕೆಥೆಡ್ರಲ್ ಆಗಿದೆ. ಯಾವುದೇ ಧರ್ಮಪ್ರಾಂತ್ಯದ ಅಧ್ಯಕ್ಷ (ಬಿಷಪ್) ರ ಗದ್ದುಗೆ (ಕೆಥೆದ್ರಾ) ಇರುವ ಪ್ರಮುಖ ದೇಗುಲಕ್ಕೆ ಈ ಸ್ಥಾನಮಾನ. ಬಿಷಪ್ ಅವರು ಪ್ರಾರ್ಥನೆ ಸಲ್ಲಿಸುವ, ಧಾರ್ಮಿಕ ಸಂಗತಿಗಳ ಆಡಳಿತಾತ್ಮಕ ವಿಷಯಗಳನ್ನು ನೋಡಿಕೊಳ್ಳುವ ಸ್ಥಳವಿದು.

LEAVE A REPLY

Please enter your comment!
Please enter your name here