Home ಧಾರ್ಮಿಕ ಸುದ್ದಿ ಹಜ್‌ ಯಾತ್ರಿಕರಿಗೆ 21 ವರ್ಷಗಳಿಂದ ಉಚಿತ ಸೇವೆ!

ಹಜ್‌ ಯಾತ್ರಿಕರಿಗೆ 21 ವರ್ಷಗಳಿಂದ ಉಚಿತ ಸೇವೆ!

ಬಾಳೆಮಕ್ಕಿ ಹಸನ್‌ ಅವರ ಮಾನವೀಯ ಕಾರ್ಯ

1100
0
SHARE

ಸುಳ್ಯ: ಪವಿತ್ರ ಹಜ್‌ ಯಾತ್ರೆಗೆ ತೆರಳಬೇಕು ಎನ್ನುವವರಿಗೆ ತತ್‌ಕ್ಷಣ ನೆನಪಾಗುವುದು ಸುಳ್ಯದ ಬಾಳೆಮಕ್ಕಿ ಅಕ್ಕಿ ವ್ಯಾಪಾರಿ ಹಸನ್‌. ಇಪ್ಪತ್ತೂಂದು ವರ್ಷಗಳಿಂದ ಯಾವ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ! ಹಜ್‌ ಯಾತ್ರಿಕರ ಪ್ರಯಾಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುತ್ತಿರುವ ಇವರು ಅದಕ್ಕಾಗಿ ಪ್ರಚಾರ ಬಯಸಿದವರಲ್ಲ. ಹಜ್ಜಾಜಿಗಳ ಸೇವೆ ಪುಣ್ಯದ ಕೆಲಸವೆಂದು ಪರಿಭಾವಿಸಿ ಮುನ್ನಡೆದವರು. ಇದು ಬಯಸದೇ ಬಂದ ಭಾಗ್ಯ ಅನ್ನುತ್ತಾರೆ ಹಸನ್‌. ಉಚಿತ ಸಹಾಯ ನೀಡಿ ಅದರಲ್ಲಿ ಭಗವಂತನನ್ನು ಕಾಣುವ ಹಸನ್‌ ಅವರು ಸರಳ, ಸಜ್ಜನಿಕೆಯಿಂದಲೂ ಚಿರಪರಿಚಿತರು.

ಹಸನ್‌ ಅವರು ಸ್ವತಃ ಹಜ್‌ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಯಾತ್ರೆಯ ಮಹತ್ವ, ನಿಯಮ ಅರಿತುಕೊಂಡರು. ಲಕ್ಷಾಂತರ ರೂ. ವ್ಯಯಿಸಿ ಹಜ್‌ ಕರ್ಮ ನಿರ್ವಹಿಸುವವರ ಆರಾಧನೆ ದೇವರ ಬಳಿ ಸ್ವೀಕಾರಾರ್ಹ ಆಗಬೇಕಾದರೆ ಅದರ ನಿಯಮ, ನಿಬಂಧನೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸತ್ಯವನ್ನು ಯಾತಾರ್ಥಿಗಳಿಗೆ ಮನದಟ್ಟು ಮಾಡುತ್ತಾರೆ. ಅದರೊಂದಿಗೆ ಸುರಕ್ಷಿತ ಪ್ರಯಾಣ, ಆರೋಗ್ಯ, ಆಹಾರ, ಇನ್ನಿತರ ಸಲಹೆ- ಮಾರ್ಗದರ್ಶನಗಳ ಕುರಿತಾಗಿಯೂ ಹಸನ್‌ ಮುತುವರ್ಜಿ ತೋರಿಸುತ್ತಾರೆ.

ಮಾಹಿತಿ ಕೊಡುತ್ತಾರೆ
ಹಜ್‌ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸುವಲ್ಲಿಂದ ಶುರು ಮಾಡಿ, ವಿಮಾನದ ಮೂಲಕ ಮಕ್ಕಾಗೆ ತೆರಳುವ ವರೆಗೆ ಸಹಕಾರ ನೀಡುತ್ತಾರೆ. ಆಗಾಗ ಬದಲಾಗುವ ಹಜ್‌ ನಿಯಮಾವಳಿಗಳು, ಪಾಸ್‌ಪೋರ್ಟ್‌, ಬ್ಯಾಂಕಿಂಗ್‌ ವ್ಯವಹಾರ, ತರಬೇತಿ ಶಿಬಿರ, ಚುಚ್ಚುಮದ್ದು, ಇಮಿಗ್ರೇಶನ್‌, ಲಗೇಜ್‌ ಮಾಹಿತಿಗಳನ್ನು ಯಾತ್ರಿಗಳಿಗೆ ನೀಡುತ್ತಾರೆ.

ಯಾತ್ರೆಯ ಸಂದರ್ಭ ಒಯ್ಯಬೇಕಾದ ವಸ್ತುಗಳು, ಔಷಧಗಳು, ಇತರ ಪರಿಕರಗಳ ಬಗ್ಗೆ ಸ್ವತಃ ಚಾರ್ಟ್‌ ತಯಾರಿಸಿ ಅದರ ಪ್ರತಿಯನ್ನು ಯಾತ್ರಿಕರಿಗೆ ನೀಡುತ್ತಾರೆ. ಬೆಂಗಳೂರು ಮೂಲಕ ಹಜ್‌ಗೆ ತೆರಳುವ ಸಂದರ್ಭ ಐದು ದಿನ ಅಲ್ಲಿಯೇ ಕ್ಯಾಂಪ್‌ ಮಾಡುತ್ತಾರೆ. ಮಂಗಳೂರಿನ ಹಜ್‌ ಶಿಬಿರದಲ್ಲೂ ಹಜ್ಜಾಜಿಗಳ ಸೇವೆಗಾಗಿ ವಾಸ್ತವ್ಯ ಹೂಡುವ ಹಸನ್‌, ಯಾತ್ರಾರ್ಥಿಗಳ ಯೋಗಕ್ಷೇಮದ ಬಗ್ಗೆ ತೆರಳುವವರೆಗೂ ಸಲಹೆ, ಮಾಹಿತಿ, ಬರಹ ರೂಪದಲ್ಲಿ ನೀಡುವುದನ್ನು ಮರೆಯುವುದಿಲ್ಲ. ಕಳೆದ ಹಲವು ವರ್ಷಗಳಿಂದ ಹಜ್‌ ಯಾತ್ರಿಕರಿಗೆ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ಏರ್ಪಡಿಸುತ್ತಿರುವ ಅನ್ಸಾರುಲ್‌ ಮುಸ್ಲಿಮೀನ್‌ ಅಸೋಸಿಯೇಶನ್‌ ಇವರ ಸೇವೆಯನ್ನು ಗುರುತಿಸಿ ಈ ಬಾರಿ ಸಮ್ಮಾನಿಸಿತ್ತು.

LEAVE A REPLY

Please enter your comment!
Please enter your name here