ಬಡಗನ್ನೂರು: ಹಿಂದೂ ಧರ್ಮ ಸಾಧು, ಸಂತರ ಸಾವಿರಾರು ವರ್ಷಗಳ ತಪಸ್ಸಿನ ಫಲವನ್ನು ಕಂಡು ಬೆಳೆದು ಬಂದಿದೆ. ಈ ಕಾರಣದಿಂದ ಪ್ರಪಂಚಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ಹಿಂದೂ ಧರ್ಮ ಹೊಂದಿದೆ ಎಂದು ಸಂಪುಟ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಹಾಗೂ ಕಿನ್ನಿಮಾಣಿ -ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದೂ ಧರ್ಮದ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳನ್ನು ಟಿ.ವಿ., ಸಾಮಾಜಿಕ ಜಾಲತಾಣಗಳಿಂದ ದೂರ ವಿಡಬೇಕು. ಹೆಣ್ಣು ಮಕ್ಕಳ ಮೇಲೆ ಕಾಳಜಿಯಿಟ್ಟು ಕೊಳ್ಳವುದು ಆವಶ್ಯಕ. ದುಶ್ಚಟಗಳಿಗೆ ಬಲಿಯಾಗದಂತೆ ಜಾಗರೂಕರಾಗಿರಬೇಕು. ಧರ್ಮಕ್ಕೆ ಹಾನಿಯಾಗದಂತೆ ನೋಡಿ ಕೊಳ್ಳಬೇಕಾಗಿರುವುದು ಎಲ್ಲರ ಹೊಣೆ ಎಂದವರು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿ, ಹಿಂದೂ ಧರ್ಮದ ಸಂಶೋಧನೆಗಳನ್ನು ಜಾರಿಗೆ ತರುವ ಕೇಂದ್ರಗಳಾಗಿ ದೇವಸ್ಥಾನಗಳು ಮೂಡಿಬರಬೇಕು ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ನ್ಯಾಯವಾದಿ ಮಹೇಶ್ ಕಜೆ, ಉದ್ಯಮಿ ವಸಂತ ಪೈ ಮಾತನಾಡಿದರು. ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಜನರಲ್ ಮ್ಯಾನೇಜರ್ ವಸಂತ ಎ., ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹಾಬಲ ರೈ ವಲತ್ತಡ್ಕ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು. ಸತ್ಯನಾರಾಯಣ ರೈ ನುಳಿಯಾಲು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಾಧಾಕೃಷ್ಣ ರೈ ಸೇರ್ತಾಜೆ ಪ್ರಸ್ತಾವನೆಗೈದರು. ಆರ್ಥಿಕ ಸಮಿತಿ ಸಹ ಸಂಚಾಲಕ ಹರೀಶ್ ಬೋರ್ಕರ್ ಕತ್ತಲಕಾನ ವಂದಿಸಿದರು.
ಸಮ್ಮಾನ
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಮರಮಟ್ಟು ಹಾಗೂ ದೇಣಿಗೆ ನೀಡಿ ಸಹಕರಿಸಿದ ಅಣ್ಣಪ್ಪ ನಾಯ್ಕ ಉಳಯ, ಸತ್ಯನಾರಾಯಣ ಭಟ್ ನುಳಿಯಾಲು, ಸುಬ್ರಹ್ಮಣ್ಯ ಭಟ್ ದೇವಸ್ಯ, ನಾರಾಯಣ ಮಣಿಯಾಣಿ ಕುಕ್ಕುಪುಣಿ, ಕೃಷ್ಣ ಭಟ್ ಕುಕ್ಕುಪುಣಿ, ಸುಶೀಲಮ್ಮ ಶ್ರೀಧರ ಭಟ್ ಮುಂಡೂರು, ಶಂಕರ ಬೋರ್ಕರ್ ಕತ್ತಲಕಾನ, ವಿಶಾಲಾಕ್ಷಿ ವಿನಯ ಕುಮಾರ್ ನೂಜಿಲೋಡು, ಗೋವಿಂದ ನಾಯ್ಕ ಕಟ್ಟತ್ತಾರು ಹಾಗೂ ದಾಮೋದರ ಮಣಿಯಾಣಿ ಡೊಂಬಟೆಗಿರಿ ಅವರನ್ನು ಸಮ್ಮಾನಿಸಲಾಯಿತು.
ಗ್ರಾಮದಲ್ಲಿ ಅಭಿವೃಧಿ
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್ ಮಾತನಾಡಿ, ನಿಡ್ಪಳ್ಳಿ ಕ್ಷೇತ್ರವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿನ ಜೀರ್ಣೋದ್ದಾರ ಕಾರ್ಯ ಆರಂಭಗೊಂಡ ಬಳಿಕ ಗ್ರಾಮದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.