Home ನಂಬಿಕೆ ಸುತ್ತಮುತ್ತ ಗೋವು ಕೇವಲ ಸಾಕುಪ್ರಾಣಿಯಲ್ಲ…ಗೋವು ದೇವರ ರೂಪ

ಗೋವು ಕೇವಲ ಸಾಕುಪ್ರಾಣಿಯಲ್ಲ…ಗೋವು ದೇವರ ರೂಪ

5408
0
SHARE

ಎಲ್ಲಾ ಪ್ರಾಣಿಗಳಲ್ಲೂ ದೇವರಿದ್ದಾನೆ. ಆದರೆ ನಾವು ಗೋವನ್ನು ದೇವರೆಂದೇ ಗುರುತಿಸಿದವರು. ಗೋವಿನ ಮಹತ್ತ್ವ ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಗೋವು ಕೇವಲ ಸಾಕುಪ್ರಾಣಿಯಲ್ಲ. ಗೋವು ಹಿಂದೂ ಧರ್ಮದಲ್ಲಿ ಇಂದ್ರನ ಸ್ವರೂಪವಾಗಿ ಪೂಜಿಸಲ್ಪಡುವ ದೇವರು. ಎಲ್ಲವನ್ನೂ ನಿಯಂತ್ರಿಸುವ, ಎಲ್ಲವನ್ನೂ ಕೊಡುವ ಶಕ್ತಿಯಿರುವವನೇ ದೇವರು ಎಂದು ಸಂಕೀರ್ಣವಾಗಿ ಹೇಳಬಹುದು. ಈ ಎಲ್ಲವನ್ನೂ ಕೊಡುವ ಅಂಶವು ಗೋವಿನಲ್ಲೂ ಇದೆ. ಹಾಗಾಗಿ ಭೂಲೋಕದಲ್ಲಿ ವಾಸಿಸುವ ನಮಗೆ ಗೋವು ದೇವರ ಪ್ರತಿರೂಪ; ಪೂಜನೀಯ.

ಗೋವನ್ನು ಯಾಕೆ ಪೂಜಿಸಬೇಕು? ಎಂಬ ಪ್ರಶ್ನೆಗೆ ಉತ್ತರವೇ ನಾವು. ಅಗೋಚರಶಕ್ತಿಯನ್ನು ಪೂಜಿಸುವ ಸುಸಂಸ್ಕೃತಿಯನ್ನು ಹೊಂದಿರುವ ನಾವು ನಮ್ಮ ಜೀವನಕ್ಕೆ ಅಗತ್ಯವಾಗಿರುವ ಗೋಚರಶಕ್ತಿಯನ್ನು ಪೂಜಿಸದೇ ಇರುವುದುಂಟೇ? ಭರತಭೂಮಿ ಎಂಬುದು ಕೃಷಿ ಪ್ರಧಾನ ದೇಶ. ಕೃಷಿಯಿಂದಲೇ ಭಾರತ ಅಭಿವೃದ್ಧಿಯಾಗಿದೆ; ಆಗುತ್ತಿದೆ. ಈ ಕೃಷಿಯಿಂದಾಗಿಯೇ ಆಹಾರ ಪದಾರ್ಥಗಳು ಉತ್ಪಾದನೆಯಾಗುತ್ತಿದೆ. ಅವನ್ನೇ ಉಣ್ಣುತ್ತಿದ್ದೇವೆ ಮತ್ತು ಬದುಕುತ್ತಿದ್ದೇವೆ. ಆದರೆ ಈ ಕೃಷಿಗೆ ಅನಾದಿಕಾಲದಿಂದಲೂ ಸಹಾಯಕವಾಗಿ ನಿಂತವುಗಳೇ ಈ ಭೂಲೋಕದ ದೇವತೆಗಳು ಅಂದರೆ ಗೋವುಗಳು. ಕೃಷಿಕಾರ್ಯಕ್ಕೆ ಗೋವುಗಳ ಬಳಕೆ ಹಿಂದೆ ಎಷ್ಟರ ಮಟ್ಟಿಗೆ ಇತ್ತೆಂಬುದು ಎಲ್ಲರೂ ತಿಳಿದಿರುವ ಸಂಗತಿ. ಇಂದು ಆಧುನಿಕ ಸಲಕರಣೆಗಳಿಂದಾಗಿ ಕೃಷಿಯಲ್ಲಿ ಗೋವು ಗೊಬ್ಬರವನ್ನು ಉತ್ಪಾದಿಸಲು ಹೆಚ್ಚು ಬಳಸ್ಪಡುತ್ತದೆಯಾದರೂ ಅದರ ಗೊಬ್ಬರದಿಂದಲೇ ಆರೋಗ್ಯಯುತವಾದ ಆಹಾರ ಪದಾರ್ಥಗಳನ್ನು ನಾವು ಪಡೆಯಬಹುದಾಗಿದೆ. ಹಾಗಾಗಿ ಗೋವು ಎಂಬುದು ಕೇವಲ ಪ್ರಾಣಿಯಲ್ಲ; ಅದ್ಭುತ ಶಕ್ತಿ.

ಗೋವಿನ ಉತ್ಪನ್ನವಾದ ಹಾಲು, ಬೆಣ್ಣೆ, ಮೊಸರು ನಿತ್ಯಜೀವನಕ್ಕೇ ಬೇಕೇಬೇಕು, ಅಷ್ಟೇ ಅಲ್ಲದೆ ಹಲವು ಮಾರಕ ರೋಗಗಳಿಗೆ ಔಷಧವಾಗಿಯೂ ಗೋವಿನ ಅರ್ಕ ಉಪಯೋಗವಾಗುದು ಇಂದು ಜಗಜ್ಜನಿತವಾದ ವಿಷಯ. ಗೋವನ್ನು ಪೂಜಿಸಲು ಹಲವು ಕಾರಣಗಳಿವೆ. ಹಿಂದಿನವರು ಗೋವನ್ನು ಬಿಟ್ಟು ಬದುಕಿದವರಲ್ಲ. ಮುಂಜಾನೆ ಎದ್ದು ಮನೆಯನ್ನು ಶುದ್ಧ ಮಾಡಲು ಇದರಿಂದ ಕೀಟಾಣುಗಳು ನಾಶವಾಗುತ್ತದೆಂಬುದು ವೈಜ್ಞಾನಿಕ ಸತ್ಯ. ಇಂದಿನ ರಾಸಾಯನಿಕಗಳು ಕೀಟಾಣುಗಳನ್ನು ಕೊಲ್ಲುತ್ತವೆಯಾದರೂ ಅದರ ಜೊತೆಗೆ ನಮಗೂ ಮಾರಕವಾಗಿವೆ. ಗೋ ಉತ್ಪನ್ನಗಳಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ಗೋವು ಎಂಬುದು ದೇವರು ನೀಡಿದ ದಿವ್ಯಚೇತನ.

ದೇವಪೂಜೆಗೆ, ಯಜ್ಞ ಯಾಗಾದಿಗಳಿಗೆ ಗೋವಿನ ಹಾಲು, ತುಪ್ಪ, ಮೊಸರು ಬಳಕೆಯಾಗುತ್ತದೆ. ಗೋವಿನ ತುಪ್ಪದಿಂದಲೇ ಅಗ್ನಿ ದೇವನನ್ನು ಆಹ್ವಾನಿಸಿ ಆ ಮೂಲಕ ಹವಿಸ್ಸನ್ನು ದೇವರಿಗೆ ಅರ್ಪಿಸಲಾಗುತ್ತದೆ. ಗೋವಿಗೂ ನಮ್ಮ ದೇವರರೂಪಗಳಿಗೂ ಅವಿನಾಭಾವ ಸಂಬಂಧಗಳಿವೆ. ಕೃಷ್ಣನು ಗೋಪಾಲನೂ ಹೌದು, ವಿಷ್ಣುವನ್ನು ಗೋವಿಂದ ಎಂದೂ ಕರೆಯಲಾಗುತ್ತದೆ. ಈಶ್ವರನ ವಾಹನ ನಂದಿ. ದೇವಲೋಕದಲ್ಲಿ ಕಾಮಧೇನು ಎಂಬ ಕೇಳಿದ್ದನ್ನು ಕೊಡುವ ಗೋಸ್ವರೂಪವಿದೆ. ಗೋವಿನ ಉತ್ಪನ್ನವಾದ ಪಂಚಗವ್ಯವು ಮನುಷ್ಯನ ಶಕ್ತಿಯನ್ನು ಹೆಚ್ಚಿಸುತ್ತವೆ. ಋಗ್ವೇದದಲ್ಲಿ ಗೋಸೂಕ್ತವಿದೆ. ಇದರಲ್ಲಿ ಗೋವಿನ ಮಹತ್ತ್ವ, ಗೋವನ್ನು ಪ್ರಾರ್ಥಿಸುವ ಬಗೆಯನ್ನು ಹೇಳಲಾಗಿದೆ.

ಬಲಿಪಾಡ್ಯದ ದಿನ ಮತ್ತು ಕೆಲವೆಡೆ ಮಾರ್ಗಶೀರ ಮಾಸದ ಹುಣ್ಣಿಮೆಯಂದು ಗೋಪೂಜೆಯನ್ನು ಮಾಡುವ ಪದ್ಧತಿಯಿದೆ. ಆ ದಿನ ಕೊಟ್ಟಿಗೆ(ಹಟ್ಟಿ)ಯನ್ನು ಸ್ವಚ್ಛಗೊಳಿಸಿ, ಹೂವು, ರಂಗೋಲಿಗಳಿಂದ, ಗೋವಿನ ಪಾದವನ್ನು ಬಿಡಿಸಿ ಅಲಂಕರಿಸಲಾಗುತ್ತದೆ. ದನ ಕರುಗಳಿಗೆ ಸ್ನಾನ ಮಾಡಿಸಿ, ಅವುಗಳ ದೇಹದ ಮೇಲೆ ಶೇಡಿ ಮತ್ತು ಕೆಮ್ಮಣ್ಣನ್ನು ನೀರನಲ್ಲಿ ಕರಡಿಕೊಂಡು ಲೋಟದ ಮೂಲಕ ಚಿತ್ತಾರ ಬರೆದು ಅಲಂಕರಿಸುವ ಕ್ರಮವಿದೆ. ಆ ಬಳಿಕ ಹೂವಿನ ಮಾಲೆ, ಅಡಿಕೆ ಬೆಳೆಗಾರರಾಗಿದ್ದರೆ ಅಡಿಕೆಯ ಮಾಲೆಗಳಿಂದ ಗೋವುಗಳನ್ನು ಶೃಂಗರಿಸಿ, ಹಣ್ಣು ಹಂಪಲು, ದೋಸೆ, ಗೋಗ್ರಾಸವೆಂಬ ಅಕ್ಕಿ ಮತ್ತು ಬಾಳೆಹಣ್ಣಿನಿಂದ ಮಾಡಿದ ವಿಶೇಷ ಖಾದ್ಯವನ್ನು ಕೊಟ್ಟು ಪೂಜಿಸಲಾಗುತ್ತದೆ. ನಮ್ಮ ಜೀವನದ ಭಾಗವೇ ಆಗಿರುವ ಗೋವಿಗೆ ವಂದಿಸುವ ದಿನವಿದು. ಗೋವು ಪರಿಸರದ ರಕ್ಷಣೆಗೂ ಕಾರಣವಾದ ಪ್ರಾಣಿಯಾಗಿರುವುದರಿಂದಲೂ ನಮ್ಮ ದೇಶದ ಸಮೃದ್ಧಿಗೆ ಕಾರಣವಾಗುವ ಶಕ್ತಿಯಾಗಿರುವುದರಿಂದಲೂ ಸದಾ ಪೂಜನೀಯ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here